ಬಾಕಿ ಬಾಡಿಗೆ ಪಾವತಿಸಿ ತೆರಳಿ: ಅನರ್ಹಗೊಂಡ ಎಐಎಡಿಎಂಕೆ ಶಾಸಕರಿಗೆ ಸೂಚನೆ

Update: 2018-10-31 16:36 GMT

ಚೆನ್ನೈ, ಅ.31: ಶಾಸಕರ ವಸತಿಗೃಹದಲ್ಲಿ ತಂಗಿದ್ದ ಕೋಣೆಯನ್ನು ಖಾಲಿ ಮಾಡಿ, ಬಾಕಿಯಿರುವ ಬಾಡಿಗೆಯನ್ನು ಪಾವತಿಸಿ ತೆರಳುವಂತೆ ಅನರ್ಹಗೊಂಡಿರುವ 18 ಎಐಎಡಿಎಂಕೆ ಶಾಸಕರಿಗೆ ವಿಧಾನಸಭೆಯ ಕಾರ್ಯದರ್ಶಿ ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಶಾಸಕರು ತಂಗಿದ್ದ ಕೋಣೆಯನ್ನು ಸೀಲ್ ಮಾಡಲಾಗಿದೆ. ವಿಧಾನಸಭೆಯ ಅಧೀನ ಕಾರ್ಯದರ್ಶಿ(ವಸತಿಗೃಹ ವ್ಯವಸ್ಥೆ)ಯ ಗಮನಕ್ಕೆ ತಂದು ಕೋಣೆಯಲ್ಲಿರುವ ತಮ್ಮ ವಸ್ತುಗಳನ್ನು ಪಡೆದುಕೊಳ್ಳುವಂತೆ ಹಾಗೂ ಬಾಕಿ ಬಾಡಿಗೆ ಪಾವತಿಸುವಂತೆ ವಿಧಾನಸಭೆ ಕಾರ್ಯದರ್ಶಿ ಕೆ.ಶ್ರೀನಿವಾಸನ್ ಜಾರಿಗೊಳಿಸಿರುವ ನೋಟಿಸನ್ನು ವಸತಿಗೃಹದಲ್ಲಿ ಅಂಟಿಸಲಾಗಿದೆ. ಅನರ್ಹಗೊಳಿಸಿರುವ ಆದೇಶದ ಹೊರತಾಗಿಯೂ ನೀವು ಶಾಸಕರ ವಸತಿ ಗೃಹವನ್ನು ಖಾಲಿ ಮಾಡಿಲ್ಲ. ಆದ್ದರಿಂದ ಮಾನ್ಯ ಸ್ಪೀಕರ್‌ರವರ ನಿರ್ದೇಶನದಂತೆ, ನಿಮಗೆ ಹಂಚಿಕೆ ಮಾಡಲಾಗಿರುವ ವಸತಿಗೃಹದ ಕೋಣೆಗೆ ಬೀಗ ಜಡಿಯಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಎಐಎಡಿಎಂಕೆಯ ಭಿನ್ನಮತೀಯ ಗುಂಪಿನ ಮುಖಂಡರಾದ ಟಿಟಿವಿ ದಿನಕರನ್ ಹಾಗೂ ವಿಕೆ ಶಶಿಕಲಾ ಅವರಿಗೆ ನಿಷ್ಠರಾಗಿರುವ ಈ 18 ಶಾಸಕರು, 2017ರ ಸೆಪ್ಟೆಂಬರ್‌ನಲ್ಲಿ ಎಐಎಡಿಂಕೆಯ ಪಳನಿಸ್ವಾಮಿ ಬಣ ಹಾಗೂ ಪನ್ನೀರ್‌ಸೆಲ್ವಂ ಬಣ ವಿಲೀನಗೊಂಡಿರುವುದನ್ನು ವಿರೋಧಿಸಿ ರಾಜ್ಯಪಾಲರನ್ನು ಭೇಟಿಯಾಗಿದ್ದರು ಹಾಗೂ ಪಳನಿಸ್ವಾಮಿ ನಾಯಕತ್ವದಲ್ಲಿ ವಿಶ್ವಾಸ ಇಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ಈ 18 ಶಾಸಕರನ್ನು ಅನರ್ಹಗೊಳಿಸಿದ್ದರು ಮತ್ತು ಈ ಕ್ರಮವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News