ಪುತ್ತೂರು: ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ
ಪುತ್ತೂರು, ಅ. 31: ಮನೆ ಮಂದಿ ವಾಸವಿಲ್ಲದ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯನ್ನು ಜಾಲಾಡಿರುವ ಘಟನೆ ಪುತ್ತೂರು ನಗರದ ಕೊಂಬೆಟ್ಟು ಎಂಬಲ್ಲಿ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಇಲ್ಲಿನ ಕೊಂಬೆಟ್ಟು ಮರಾಠಿ ಸಮಾಜ ಭವನದ ಸಮೀಪದಲ್ಲಿರುವ ವಾಸು ಭಂಡಾರಿ ಎಂಬವರ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಅಲ್ಲಿಯೇ ವಾಸ್ತವ್ಯವಿರುವ ವಾಸು ಭಂಡಾರಿ ಕುಟುಂಬ ಅವರ ಮನೆ ಆವರಣದಲ್ಲಿರುವ ನಾಗ ಹಾಗೂ ದೈವಗಳ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಬಂದು ಹೋಗುತ್ತಿದ್ದು ಉಳಿದ ದಿನಗಳಲ್ಲಿ ಮನೆಯಲ್ಲಿ ಯಾರೂ ವಾಸ್ತವ್ಯವಿರುತ್ತಿರಲಿಲ್ಲ.
ಸೋಮವಾರ ಸಂಜೆ ವೇಳೆಗೆ ನೆರೆ ಮನೆಯವರು ಹೂ ಕೊಯ್ಯಲೆಂದು ಮನೆಯ ಕಾಂಪೌಂಡ್ ಬಳಿ ಹೋದಾಗ ಮನೆಯ ಎದುರಿನ ಬಾಗಿಲು ತೆರೆದುಕೊಂಡಿರುವುದು ಬೆಳಕಿಗೆ ಬಂದಿದೆ. ಮಾಹಿತಿ ಅರಿತು ಅಪರಾಧ ಪತ್ತೆ ವಿಭಾಗದ ಎಸ್.ಐ ರುಕ್ಮಯ್ಯ ಮೂಲ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಎದುರಿನ ಬಾಗಿಲನ್ನು ಒಡೆದು ಒಳ ನುಗಿರುವುದಲ್ಲದೆ ಲಾಕರ್ ಮುರಿದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿದೆ. ಬೆಡ್ ರೂಂನ ಮಂಚದ ಮೇಲೆ ಕತ್ತಿಯೊಂದು ಪತ್ತೆಯಾಗಿದೆ ಎಂದು ದೂರಲಾಗಿದೆ.
ಪೊಲೀಸರು ಮನೆ ಮಂದಿಗೆ ದೂರವಾಣಿ ಮೂಲಕ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಯಾವುದೇ ರೀತಿಯ ಚಿನ್ನಾಭರಣ ಹಾಗೂ ನಗದು ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ಕಳ್ಳರು ಚಿನ್ನಾಭರಣಕ್ಕಾಗಿ ಜಾಲಾಡಿ ಹಿಂದಿರುಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.