ಇನ್ನು ಕುಸ್ತಿಪಟುಗಳಿಗೂ ಕೇಂದ್ರ ಗುತ್ತಿಗೆ ಭಾಗ್ಯ!
ಹೊಸದಿಲ್ಲಿ, ಅ.31: ಇದೇ ಮೊದಲ ಬಾರಿ ಕ್ರಿಕೆಟ್‌ನಂತೆಯೇ ಭಾರತದ ಕುಸ್ತಿಪಟುಗಳಿಗೂ ಕೇಂದ್ರ ಗುತ್ತಿಗೆ ನೀಡುವ ಕುರಿತು ಗಂಭೀರ ಚಿಂತನೆ ನಡೆಸಲಾಗುತ್ತಿದೆ. ವಿವಿಧ ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನ ಆಧರಿಸಿ ಕೇಂದ್ರಗುತ್ತಿಗೆ ಶ್ರೇಣಿ ನಿರ್ಧರಿಸಲಾಗುತ್ತದೆ.
ಕುಸ್ತಿ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಸಂಬಂಧ ಪ್ರಮುಖ ಕ್ರೀಡಾ ಚಾನಲ್‌ಗಳೊಂದಿಗೆ ಮಾತುಕತೆಯೂ ಅಂತಿಮ ಹಂತದಲ್ಲಿದೆ. 2019ರಿಂದ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಪಂದ್ಯಗಳು ಸುಮಾರು 100 ದಿನಗಳ ಕಾಲ ನೇರ ಪ್ರಸಾರವಾಗಲಿದೆ. ಕುಸ್ತಿಪಟುಗಳ ಕೇಂದ್ರ ಗುತ್ತಿಗೆ ಪದ್ಧತಿಯು ನ.15 ರಿಂದಲೇ ಜಾರಿಗೆ ಬರಲಿದೆ. ಈ ಪದ್ಧತಿಯಿಂದ ಜೂನಿಯರ್, ಸಬ್-ಜೂನಿಯರ್ ಅಂಡರ್-23ಹಾಗೂ ಅಂಡರ್-15 ವಯೋಮಿತಿಯ ಕುಸ್ತಿಪಟುಗಳು ಸೇರಿದಂತೆ ಸುಮಾರು 150 ಕುಸ್ತಿಪಟುಗಳಿಗೆ ಲಾಭವಾಗಲಿದೆ. ಪ್ರತಿ ವರ್ಷವೂ ಗುತ್ತಿಗೆಯನ್ನು ನವೀಕರಿಸಲಾಗುತ್ತದೆ.
ಕೇಂದ್ರ ಗುತ್ತಿಗೆ ಶ್ರೇಣಿಯ ವೇಳೆ ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್, ಏಶ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್, ಯೂತ್ ಗೇಮ್ಸ್ಸ್ ಹಾಗೂ ಇತರ ಪ್ರಮುಖ ಟೂರ್ನಿಗಳಲ್ಲಿ ಕುಸ್ತಿಪಟುಗಳ ಪದಕದ ಸಾಧನೆಯನ್ನು ಪರಿಗಣಿಸಲಾಗುತ್ತದೆ.
ಭಾರತ ಕುಸ್ತಿ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಡಬ್ಲುಟಿಎ ಅಧಿಕಾರಿಗಳು, ವಾಣಿಜ್ಯ ಪಾಲುದಾರ ಸ್ಪೋರ್ಟಿ ಸೊಲ್ಯೂಶನ್ ಅಧಿಕಾರಿಗಳು ಹಾಗೂ ಸುಶೀಲ್‌ಕುಮಾರ್, ಬಜರಂಗ್, ಯೋಗೇಶ್ವರ ದತ್ತ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ ದಿವ್ಯಾ ಕಾಕ್ರನ್ ಸಹಿತ 15 ಮಂದಿ ಕುಸ್ತಿಪಟುಗಳು ಭಾಗವಹಿಸಿದ್ದರು.