ರಾಮ್‌ಕುಮಾರ್‌ಗೆ ಸಿಂಗಲ್ಸ್ ನಲ್ಲಿ ಸೋಲು, ಡಬಲ್ಸ್ ನಲ್ಲಿ ಜಯ
ಬೀಜಿಂಗ್,ಅ.31: ಚೀನಾದಲ್ಲಿ ನಡೆಯುತ್ತಿರುವ ಶೆಂಝೆನ್ ಚಾಲೆಂಜರ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಸೋಲುಂಡಿದ್ದಾರೆ. ಆದರೆ, ಸಹ ಆಟಗಾರ ಸಾಕೇತ್ ಮೈನೇನಿ ಜೊತೆಗೂಡಿ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.
ಬುಧವಾರ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ 121ನೇ ರ್ಯಾಂಕಿನ ರಾಮ್‌ಕುಮಾರ್ ಈಜಿಪ್ಟ್‌ನ ಮುಹಮ್ಮದ್ ಸವಾತ್ ವಿರುದ್ಧ 6-7(3), 4-6 ಅಂತರದಿಂದ ಸೋತಿದ್ದಾರೆ.
ರಾಮ್‌ಕುಮಾರ್ ಸೋಲಿನೊಂದಿಗೆ ಸಿಂಗಲ್ಸ್ ವಿಭಾಗದಲ್ಲಿ ಸಸಿ ಕುಮಾರ್ ಮುಕುಂದ್ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರ. ಮುಕುಂದ್ ಗುರುವಾರ ಕೆನಡಾದ 8ನೇ ಶ್ರೇಯಾಂಕದ ಫಿಲಿಪ್ ಪೆಲಿವೊ ಸವಾಲು ಎದುರಿಸಲಿದ್ದಾರೆ.
ರಾಮ್‌ಕುಮಾರ್ ಹಾಗೂ ಮೈನೇನಿ ಅವರನ್ನೊಳಗೊಂಡ ಭಾರತದ ಪುರುಷರ ಡಬಲ್ಸ್ ತಂಡ ಮೂರನೇ ಶ್ರೇಯಾಂಕದ ಮಾವೊ ಕ್ಸಿನ್ ಗಾಂಗ್ ಹಾಗೂ ಝಿ ಝಾಂಗ್ ವಿರುದ್ಧ 6-3, 3-6, 10-8 ಅಂತರದಿಂದ ಗೆಲುವು ಸಾಧಿಸಿದೆ.
ಮೊದಲ ಸುತ್ತಿನಲ್ಲಿ ಜಯ ಸಾಧಿಸಿರುವ ಭಾರತದ ಅಗ್ರ ಶ್ರೇಯಾಂಕದ ಜೀವನ್ ಹಾಗೂ ಶ್ರೀರಾಮ್ ಬಾಲಾಜಿ ಜೋಡಿ ಸಫ್ವತ್ ಹಾಗೂ ಅಲೆಕ್ಸಾಂಡರ್ ನೆಡೊವ್‌ಸೊವ್‌ರನ್ನು 7-5, 2-6, 10-7 ಅಂತರದಿಂದ ಮಣಿಸಿದರು.