ರಫೇಲ್ ಹಗರಣ: ಸುಪ್ರೀಂಗೂ ಮಾಹಿತಿ ನೀಡಲು ಕೇಂದ್ರ ನಕಾರ?

Update: 2018-11-01 03:31 GMT

ಹೊಸದಿಲ್ಲಿ, ನ.1: ರಫೇಲ್ ಯುದ್ಧವಿಮಾನಗಳ ಬೆಲೆ ಮತ್ತು ಅದರ ಪ್ರಯೋಜನಗಳ ಬಗ್ಗೆ 10 ದಿನಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಬೆನ್ನಲ್ಲೇ, ಈ ಮಾಹಿತಿಯನ್ನು ನೀಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದು ಹಗರಣದ ಅವ್ಯವಹಾರ ಸಾಧ್ಯತೆ ಬಗ್ಗೆ ಮತ್ತಷ್ಟು ಶಂಕೆ ಹುಟ್ಟುಹಾಕಿದೆ.

ಕೋರ್ಟ್ ಸೂಚನೆಯ ಹೊರತಾಗಿಯೂ, ಈ ಯುದ್ಧವಿಮಾನದ ಬೆಲೆ ಹಾಗೂ ಇದು ಒಳಗೊಂಡಿರುವ ಶಸ್ತ್ರಾಸ್ತ್ರಗಳ ಬಗೆಗಿನ ಮಾಹಿತಿಗಳು ರಹಸ್ಯವಾಗಿದ್ದು, ಇದನ್ನು ಬಹಿರಂಗಪಡಿಸುವುದು ಅಸಾಧ್ಯ ಎಂಬ ಅಫಿಡವಿಟ್ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಯುದ್ಧವಿಮಾನದ ಸಮಗ್ರ ಮಾಹಿತಿಯನ್ನು ಸರ್ಕಾರ ಸಂಸತ್ತಿಗೂ ನೀಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠದ ಮುಂದೆ ಸರ್ಕಾರದ ನಿಲುವನ್ನು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸ್ಪಷ್ಟಪಡಿಸಿದರು. ವಿಮಾನಕ್ಕೆ ನಿಗದಿಪಡಿಸಿರುವ ಬೆಲೆ ಹಾಗೂ ವಿಮಾನದ ವೆಚ್ಚದ ವಿವರಗಳನ್ನು ಸರ್ಕಾರ ಸಂಸತ್ತಿನಲ್ಲಿ ನೀಡಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಯಾವುದೇ ಅಡ್ಡಿ ಇಲ್ಲ ಎಂದು ಇದಕ್ಕೂ ಮುನ್ನ ಅರ್ಜಿದಾರರು ವಾದಿಸಿದ್ದರು.

ಸರ್ಕಾರ ಸಂಸತ್ತಿಗೆ ನೀಡಿರುವುದು ವಿಮಾನದ ಮೂಲ ಬೆಲೆಯೇ ವಿನಃ ಭಾರತ ಮತ್ತು ಫ್ರಾನ್ಸ್ ಅಂತರ ಸರ್ಕಾರ ಒಪ್ಪಂದದ ಅನ್ವಯ ಡಸಾಲ್ಟ್ ವಿತರಿಸಲಿರುವ ಸಂಪೂರ್ಣ ಶಸ್ತ್ರಸಜ್ಜಿತವಾದ ವಿಮಾನದ ಬೆಲೆಯನ್ನು ಬಹಿರಂಗಪಡಿಸಿಲ್ಲ ಎಂದು ಮೂಲಗಳು ಹೇಳಿವೆ.

ಯುಪಿಎ ಸರ್ಕಾರ 126 ರಫೇಲ್ ಯುದ್ಧವಿಮಾನಗಳ ಖರೀದಿಗೆ ಮಾಡಿಕೊಂಡಿದ್ದ ಒಪ್ಪಂದ ರದ್ದುಪಡಿಸಿ, 36 ವಿಮಾನಗಳನ್ನು ಹೆಚ್ಚು ವೆಚ್ಚದಲ್ಲಿ ಖರೀದಿಸಲಾಗುತ್ತಿದೆ ಎಂದು ಆಪಾದಿಸಿ, ವಿರೋಧ ಪಕ್ಷಗಳು ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News