ಗಂಗೆಗೂ ಇನ್ನು ಪೊಲೀಸ್ ಭದ್ರತೆ!
ಹೊಸದಿಲ್ಲಿ, ನ.1: ಗಂಗಾನದಿಯ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನದಿಯುದ್ದಕ್ಕೂ ಸಶಸ್ತ್ರ ಪೊಲೀಸರನ್ನು ಒಳಗೊಂಡ "ಗಂಗಾ ಸುರಕ್ಷಾ ಪಡೆ" ನಿಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಗಂಗಾನದಿ ಕರಡು ಮಸೂದೆ- 2018ರ ಅನ್ವಯ ನದಿ ಮಲಿನಗೊಳಿಸುವವರನ್ನು ತಕ್ಷಣ ಬಂಧಿಸಲು ಈ ಪಡೆಗೆ ಅಧಿಕಾರ ನೀಡಲಾಗುತ್ತದೆ. ಗಂಗಾನದಿಯನ್ನು ಸ್ವಚ್ಛಗೊಳಿಸುವುದು ಮತ್ತು ಅದರ ಪುನರುಜ್ಜೀವನಕ್ಕೆ ನೆರವಾಗುವುದು ಇದರ ಉದ್ದೇಶ ಎಂದು ಈ ಕರಡು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಷ್ಟ್ರೀಯ ಗಂಗಾ ಮಂಡಳಿಯ ಬೇಡಿಕೆಯಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಸುರಕ್ಷಾ ಪಡೆ ಸ್ಥಾಪಿಸಲಿದೆ. ಗಂಗಾನದಿಯ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ಮುಚ್ಚಿಸಲು ಸೂಚನೆ ನೀಡುವುದು, ಅಣೆಕಟ್ಟು ನಿರ್ಮಾಣ ತಡೆಯುವುದು ಮತ್ತು ಸರಾಗ ಹರಿವಿಗೆ ಅಡ್ಡಿಯಾಗುವ ಇತರ ನಿರ್ಮಾಣ ಚಟುವಟಿಕೆಗಳನ್ನು ತಡೆಯುವ ಅಧಿಕಾರವನ್ನು ಐದು ಮಂದಿ ತಜ್ಞರ ರಾಷ್ಟ್ರೀಯ ಗಂಗಾ ಮಂಡಳಿಗೆ ನೀಡಲಾಗಿತ್ತು.
ಗಂಗಾ ಸ್ವಚ್ಛತೆಗೆ ಆಗ್ರಹಿಸಿ ಅನಿದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪರಿಸರವಾದಿ ಜಿ.ಡಿ.ಅಗರ್‌ವಾಲ್ ಅಕ್ಟೋಬರ್ 11ರಂದು ನಿಧನರಾಗುವ ಮುನ್ನ ಸರ್ಕಾರ ನೀಡಿದ್ದ ಕರಡು ಮಸೂದೆಯ ಪ್ರತಿ "ಹಿಂದೂಸ್ತಾನ್ ಟೈಮ್ಸ್"ಗೆ ಲಭ್ಯವಾಗಿದೆ. ಗಂಗೆಯನ್ನು ಮೊದಲಿನ ಸ್ಥಿತಿಗೆ ತರುವುದು ಮತ್ತು ಸರಾಗ ಹರಿವನ್ನು ಖಾತ್ರಿಪಡಿಸುವ ಮೂಲಕ ಗಂಗೆಯ ಪುನರುಜ್ಜೀವನ ಮಾಡುವುದು ಈ ಮಸೂದೆಯ ಉದ್ದೇಶ ಎಂದು ಸ್ಪಷ್ಟಪಡಿಸಲಾಗಿದೆ.
ಈ ಮಸೂದೆಯನ್ನು ಈಗಾಗಲೇ ಅಂತರ ಸಚಿವಾಲಯ ಪ್ರಸರಣಕ್ಕೆ ಕಳುಹಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಯು.ಪಿ.ಸಿಂಗ್ ಸ್ಪಷ್ಟಪಡಿಸಿದ್ದಾರೆ. ಈ ಮಸೂದೆಯ ಪ್ರಕಾರ, ಗಂಗಾನದಿ ಮಲಿನಗೊಳಿಸುವವರನ್ನು ಬಂಧಿಸಿ, ಹತ್ತಿರದ ಠಾಣೆಗೆ ಒಯ್ಯುವ ಅಧಿಕಾರ ಸಶಸ್ತ್ರ ಪಡೆಗೆ ಇರುತ್ತದೆ.