ಬಿಹಾರ ದೋಸ್ತಿ ಕುಸ್ತಿ: ಕುಶ್ವಾಹ ಸಿಡಿಸಿದ ಹೊಸ ಬಾಂಬ್

Update: 2018-11-01 04:02 GMT

ಪಾಟ್ನಾ, ನ.1: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2020ರ ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಎನ್‌ಡಿಎ ಮಿತ್ರಪಕ್ಷವಾದ ಲೋಕ ಸಮತಾ ಪಕ್ಷದ ಮುಖಂಡ ಹಾಗೂ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಹೊಸ ಬಾಂಬ್ ಸಿಡಿಸಿದ್ದಾರೆ.

2020ರ ಬಳಿಕ ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ನಿತೀಶ್ ಸ್ವತಃ ತಮ್ಮ ಬಳಿ ಹೇಳಿದ್ದಾಗಿ ಕೇಂದ್ರ ಸಚಿವರು ಹೇಳಿದ್ದಾರೆ.
"ನಾನು ಯಾವ ರಾಜಕೀಯವನ್ನೂ ಮಾಡುತ್ತಿಲ್ಲ ಅಥವಾ ಸಿಎಂ ಬಗೆಗೆ ಯಾವ ವಿಡಂಬನಾತ್ಮಕ ಹೇಳಿಕೆಯನ್ನೂ ನೀಡುತ್ತಿಲ್ಲ. ಆದರೆ 2020ರ ಬಳಿಕ ಸಿಎಂ ಹುದ್ದೆಯಲ್ಲಿ ಮುಂದುವರಿಯಬಾರದು ಎಂಬ ಅಪೇಕ್ಷೆಯನ್ನು ಸ್ವತಃ ಅವರೇ ವ್ಯಕ್ತಪಡಿಸಿದ್ದಾರೆ. ಈಗಾಗಲೇ 15 ವರ್ಷ ಕಾಲ ರಾಜ್ಯವಾಳಿದ್ದು, ಇನ್ನೂ ಎಷ್ಟು ವರ್ಷ ಮುಂದುವರಿಯಬೇಕು ಎಂಬುದಾಗಿ ಸಿಎಂ ಹೇಳಿದ್ದಾರೆ" ಎಂದು ಕುಶ್ವಾಹ ಸ್ಪಷ್ಟಪಡಿಸಿದರು. ಸರ್ದಾರ್ ಪಟೇಲ್ ಅವರ ಜನ್ಮದಿನಾಚರಣೆ ಅಂಗವಾಗಿ ಪಕ್ಷ ಆಯೋಜಿಸಿದ್ದ ಸಮಾರಂಭದಲ್ಲಿ ಸಚಿವರು ಈ ಹೇಳಿಕೆ ನೀಡಿದರು.

ಕೆಲ ತಿಂಗಳ ಹಿಂದೆ ನಿತೀಶ್ ಬಳಿ ಮಾತನಾಡಿದಾಗ ಅವರು ಭಾರವಾದ ಹೃದಯದಿಂದ ಈ ಮಾತು ಹೇಳಿದ್ದರು ಎಂದು ಕುಶ್ವಾಹ ಸ್ಪಷ್ಟಪಡಿಸಿದ್ದಾರೆ. ಆದರೆ ನಿತೀಶ್ ಕುಮಾರ್ ಅವರಾಗಲೀ, ಅವರ ಪಕ್ಷವಾದ ಸಂಯುಕ್ತ ಜನತಾದಳವಾಗಲೀ, ಸಿಎಂ ಅವರ ರಾಜಕೀಯ ನಿವೃತ್ತಿ ಬಗ್ಗೆ ಇದುವರೆಗೆ ಬಹಿರಂಗಪಡಿಸದ ಹಿನ್ನೆಲೆಯಲ್ಲಿ ಕುಶ್ವಾಹ ಹೇಳಿಕೆ ಅಚ್ಚರಿ ಮೂಡಿಸಿದೆ.

ಕುಶ್ವಾಹ ಹೇಳಿಕೆಯನ್ನು ತಳ್ಳಿಹಾಕಿರುವ ಜೆಡಿಯು ವಕ್ತಾರ ನೀರಜ್ ಕುಮಾರ್ ಅವರು, "ನಿತೀಶ್ ಕುಮಾರ್ ಜನ ನೀಡಿದ ತೀರ್ಪಿನ ಅನ್ವಯ ಸಿಎಂ ಆಗಿದ್ದಾರೆಯೇ ವಿನಃ ಶಾಸಕರು ಮಾಡಿರುವ ಆಯ್ಕೆಯಲ್ಲ" ಎಂದು ತಿರುಗೇಟು ನೀಡಿದ್ದಾರೆ.

ನಿತೀಶ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಕುಶ್ವಾಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2020ರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಸಿಎಂ ಅಭ್ಯರ್ಥಿಯಾಗಿ ನಿತೀಶ್ ಅವರನ್ನು ಏಕೆ ಬಿಂಬಿಸಬೇಕು ಎಂದು ಕಳೆದ ಜುಲೈನಲ್ಲಿ ಕುಶ್ವಾಹ ತಗಾದೆ ತೆಗೆದಿದ್ದರು. ಎನ್‌ಡಿಎ ಪಕ್ಷಗಳ ನಡುವಿನ ಸ್ಥಾನ ಹಂಚಿಕೆಯಲ್ಲಿ ಎಲ್‌ಎಸ್‌ಪಿ ಗೌರವಾರ್ಹ ಪ್ರಮಾಣದ ಸ್ಥಾನ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಕುಶ್ವಾಹ ಎನ್‌ಡಿಎ ಮುಖಂಡರ ವಿರುದ್ಧ ಗರಂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News