×
Ad

ಅನ್ಯ ಭಾಷೆಗಳ ಮೇಲಿನ ಗೌರವ ಕನ್ನಡಿಗರ ದೌರ್ಬಲ್ಯವಲ್ಲ: ಸಚಿವ ಯು.ಟಿ.ಖಾದರ್

Update: 2018-11-01 10:24 IST

ಮಂಗಳೂರು, ನ.1: ಕನ್ನಡಿಗರು ಎಲ್ಲಾ ಭಾಷೆಗಳನ್ನು ಗೌರವಿಸುತ್ತಾರೆ. ಕನ್ನಡ ನಮ್ಮ ಮನೆ-ಮನದ ಹೆಬ್ಬಾಗಿಲು. ಇಂಗ್ಲಿಷ್ ಸಹಿತ ಎಲ್ಲಾ ಭಾಷೆಗಳು ನಮ್ಮ ಮನೆ-ಮನದ ಕಿಟಕಿಗಳಾಗಿದ್ದು, ಅವು ಸದಾ ತೆರೆದಿರುತ್ತದೆ. ಹಾಗಂತ ನಮ್ಮೀ ಒಳ್ಳೆಯ ಗುಣಗಳು ಕನ್ನಡಿಗರ ದೌರ್ಬಲ್ಯ ಎಂದು ಯಾರೀ ತಿಳಿಯಬಾರದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಗುರುವಾರ ನಡೆದ ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ದೇಶದಲ್ಲೇ ಕರ್ನಾಟಕ ಶಾಂತಿ-ಸೌಹಾರ್ದ, ಸಮೃದ್ಧಿಯ ರಾಜ್ಯವಾಗಿದೆ. ದೇಶ ಪ್ರೇಮದಲ್ಲೂ ಕನ್ನಡಿಗರು ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ರಾಜ್ಯದ ನಾಡಗೀತೆಯೇ ಸಾಕ್ಷಿಯಾಗಿದೆ. ಕನ್ನಡಿಗರು ಪ್ರಥಮ ಗೌರವವನ್ನು ದೇಶಕ್ಕೆ ಸಲ್ಲಿಸಲಿದ್ದಾರೆ. ಕನ್ನಡಿಗರಿಗೆ ಮೊದಲು ದೇಶ ಮುಖ್ಯ. ಬಳಿಕ ರಾಜ್ಯ. ದೇಶವಿದ್ದರೆ ರಾಜ್ಯ, ರಾಜ್ಯವಿದ್ದರೆ ಭಾಷೆ. ಇದು ಕನ್ನಡಿಗರ ನಿಲುವಾಗಿದ್ದು, ಇದೇ ಕನ್ನಡಿಗರ ಗೆಲುವು ಆಗಿದೆ. ಆದರೆ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ನಾಡಿನಲ್ಲಿ ಕುವೆಂಪು ಅವರ ‘ಕನ್ನಡ ನಾಡಿಗೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂಬ ಕರೆಗೆ ಓಗೊಟ್ಟು ನಾವೆಷ್ಟು ಮಂದಿ ಕನ್ನಡಕ್ಕಾಗಿ ಕೈ ಎತ್ತಿದ್ದೇವೆ? ಕನ್ನಡಕ್ಕಾಗಿ ಕೊರಳೆತ್ತಿದ್ದೇವೆ? ವರ್ಷಕ್ಕೊಮ್ಮೆ ಬರುವ ಕನ್ನಡ ರಾಜ್ಯೋತ್ಸವದ ಒಂದು ದಿನ ಕನ್ನಡವನ್ನು ನೆನಪಿಸಿದರೆ ಸಾಕೇ? ನಾವು ನವೆಂಬರ್ ಕನ್ನಡಿಗರಾಗುತ್ತಿದ್ದೇವೆಯೇ? ಎಂದು ಸಚಿವ ಯು.ಟಿ.ಖಾದರ್ ಪ್ರಶ್ನಿಸಿದರು.

ಗಡಿನಾಡು ಕನ್ನಡಿಗರಿಗೆ ಪ್ರಶಸ್ತಿ ಮೀಸಲು: ದ.ಕ.ಜಿಲ್ಲೆಯ ಪಕ್ಕದಲ್ಲೇ ಇರುವ ಕಾಸರಗೋಡಿನಲ್ಲಿ ಇಂದೂ ಕನ್ನಡಕ್ಕಾಗಿ ಧ್ವನಿ ಎತ್ತುವವರಿದ್ದಾರೆ. ಕನ್ನಡಪರ ಸಂಘಟನೆಗಳಿವೆ. ಹಾಗಾಗಿ ಮುಂದಿನ ರಾಜ್ಯೋತ್ಸವ ಸಂದರ್ಭ ಜಿಲ್ಲಾ ಮಟ್ಟದ ಪ್ರಶಸ್ತಿ ಪಟ್ಟಿಯಲ್ಲಿ ಗಡಿನಾಡು ಕನ್ನಡಿಗರಿಗೂ ಪ್ರಶಸ್ತಿಯನ್ನು ಮೀಸಲಿಡುವುದಾಗಿ ಘೋಷಿಸಿದ ಸಚಿವ ಯು.ಟಿ.ಖಾದರ್, ದಕ್ಷಿಣದಲ್ಲಿ ಕರ್ನಾಟಕ ಏಕೀಕರಣಕ್ಕೆ ಮೊದಲ ಕೂಗು ಮೊಳಗಿದ್ದು ಕಾಸರಗೋಡಿನಲ್ಲಿ ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಅಭಿವೃದ್ಧಿಯಲ್ಲಿ ಜಿಲ್ಲೆ ಮುಂದೆ: ಅಭಿವೃದ್ಧಿಯಲ್ಲಿ ದ.ಕ.ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿಯಾಗಿದೆ. ಆ ಪೈಕಿ ಮುಖ್ಯಮಂತ್ರಿಯ ಗ್ರಾಮವಿಕಾಸ ಯೋಜನೆಯಡಿ ದ.ಕ.ಜಿಲ್ಲೆಯ 32 ಗ್ರಾಮಗಳು ಆಯ್ಕೆಯಾಗಿದ್ದು, 32 ಕೋ.ರೂ. ಪೈಕಿ 1180.46 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ಒಳಚರಂಡಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. 2ನೆ ಹಂತದಲ್ಲಿ 5654.18 ಲಕ್ಷ ರೂ. ವೆಚ್ಚದಲ್ಲಿ ಬಂಟ್ವಾಳದ ಒಳಚರಂಡಿ ಯೋಜನೆಯೂ ಮಂಜೂರಾಗಿದೆ. ಮೂಡುಬಿದಿರೆ, ಬೆಳ್ತಂಗಡಿ ನಗರದ ಒಳಚರಂಡಿ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಗೆ ನಗರೋತ್ಥಾನ ಯೋಜನೆಯಡಿ 2 ಮತ್ತು 3ನೆ ಹಂತದಲ್ಲಿ 200 ಕೋ.ರೂ. ಬಿಡುಗಡೆಯಾಗಿದೆ. ಅದರಲ್ಲಿ 524 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 226 ಕಾಮಗಾರಿ ಪೂರ್ಣಗೊಂಡಿದೆ. 157.84 ಕೋ.ರೂ. ಬಳಸಲಾಗಿದೆ.

‘ಆರೋಗ್ಯ ಕರ್ನಾಟಕ’ ಯೋಜನೆಯಡಿ 705.84 ಲಕ್ಷ ರೂ. ಮೊತ್ತದಲ್ಲಿ 1,425 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಮಡಿಲು ಯೋಜನೆಯಡಿ 80, ಯಶಸ್ವಿನಿ ಯೋಜನೆಯಡಿ 375, ಜನನಿ ಸುರಕ್ಷಾ ಯೋಜನೆಯಡಿ 4,608, ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ 583 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಭತ್ತ ಬೆಳೆಯಲು, ಯಾಂತ್ರೀಕೃತ ನಾಟಿ ಪ್ರೋತ್ಸಾಹಿಸಲು ಕೃಷಿ ಇಲಾಖೆಯ ಮೂಲಕ ಸಹಾಯ ಧನ ನೀಡಲಾಗುತ್ತಿದೆ. ಕೃಷಿ ಯಾಂತ್ರೀಕೃತ ಯೋಜನೆಯಡಿ 3 ಕೋ.ರೂ. ಮತ್ತು ಕೃಷಿ ಉತ್ಪನ್ನ ಸಂಸ್ಕರಣೆ ಯೋಜನೆಯಡಿ 70 ಲಕ್ಷ ರೂ. ಅನುದಾನ ವಿನಿಯೋಗಿಸಲಾಗಿದೆ. 2018-19ನೆ ಸಾಲಿನಲ್ಲಿ ಜಿಲ್ಲೆಯ 953 ಯಾಂತ್ರೀಕೃತ ದೋಣಿಗಳಿಗೆ 25.29 ಕೋ.ರೂ. ಡೀಸೆಲ್ ಮೇಲಿನ ಮಾರಾಟ ಕರ ಸಹಾಯಧನವನ್ನು ದೋಣಿ ಮಾಲಕರ ನೇರ ಖಾತೆಗೆ ವರ್ಗಾಯಿಸಲಾಗಿದೆ. ಜಿಲ್ಲೆಯ 6 ಇಂದಿರಾ ಕ್ಯಾಂಟೀನ್‌ಗಳ ಪೈಕಿ ಬಂಟ್ವಾಳ, ಸುಳ್ಯ, ಪುತ್ತೂರಿನ ಕಾಮಗಾರಿ ಪ್ರಗತಿಯಲ್ಲಿದೆ. ಮೂಡುಬಿದಿರೆ ಮತ್ತಯ ಕಡಬ ತಾಲೂಕಿನಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಲು ತಲಾ 10 ಕೋ.ರೂ. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರೈತರ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ 72,450 ರೈತರಿಗೆ 562 ಕೋ.ರೂ. ಪ್ರಯೋಜನ ಲಭಿಸಲಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಡಾ.ಭರತ್ ಶೆಟ್ಟಿ, ಮೇಯರ್ ಕೆ.ಭಾಸ್ಕರ್ ಮೊಯ್ಲಿ, ಉಪಮೇಯರ್ ಕೆ.ಮುಹಮ್ಮದ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಲ್ಲಾ ಎಸ್ಪಿರವಿಕಾಂತೇ ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡದಲ್ಲಿ ಪರೇಡ್:ಸರಕಾರಿ ಉತ್ಸವಗಳ ಕವಾಯತು (ಪರೇಡ್) ಆಂಗ್ಲಭಾಷೆಯಲ್ಲಿ ನಡೆಯುವುದು ಸಾಮಾನ್ಯ. ಆದರೆ, ಗುರುವಾರ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದ ಪರೇಡ್ ಸಂಪೂರ್ಣ ಕನ್ನಡಮಯವಾಗಿತ್ತು. ಜಿಲ್ಲಾ ಎಸ್ಪಿ ಡಾ.ರವಿಕಾಂತೇ ಗೌಡ ಅವರಿಂದ ರಚಿಸಲ್ಪಟ್ಟ ಕನ್ನಡ ಭಾಷೆಯ ಈ ಕವಾಯತನ್ನು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಅಳವಡಿಸಲಾಗಿದೆ. ಆ ಮೂಲಕ ರಾಜ್ಯದ 2ನೆ ಜಿಲ್ಲೆಯಾಗಿ ದ.ಕ.ಜಿಲ್ಲೆಯು ಗುರುತಿಸಲ್ಪಟ್ಟಿತು. 2016ರಲ್ಲಿ ರವಿಕಾಂತೇ ಗೌಡ ಬೆಳಗಾವಿ ಎಸ್ಪಿಯಾಗಿದ್ದಾಗ ಪರೇಡ್‌ಗೆ ಕನ್ನಡ ಬಳಸಲಾಗಿತ್ತು. ಇದು ದೇಶಮಟ್ಟದಲ್ಲಿ ಗಮನ ಸೆಳೆದಿತ್ತು.

ಆಕರ್ಷಕ ಮೆರವಣಿಗೆ: ಜಿಲ್ಲಾ ರಾಜ್ಯೋತ್ಸವ ಸಮಿತಿ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಗರದ ಜ್ಯೋತಿ ಸಮೀಪದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹೊರಟ ಮೆರವಣಿಗೆಯನ್ನು ಲೇಖಕಿ ಆರೂರು ಲಕ್ಷ್ಮೀರಾವ್ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಕಿಶೋರ್ ಮತ್ತು ಬಳಗ ಸುಳ್ಯ ಇವರ ಕಂಗೀಲು ನೃತ್ಯ, ಹರೀಶ್ ಮತ್ತು ಬಳಗ ಗಿಡಿಗೆರೆ ಕಟೀಲು ಅವರಿಂದ ಚೆಂಡೆ, ಮಹೇಶ್ ಭಟ್ ಸರಸ್ವತಿ ಕಲಾ ಆರ್ಟ್ಸ್ ಮಂಗಳೂರು ಅವರ ಯಕ್ಷಗಾನ ಬೊಂಬೆಗಳು, ಕೀಲುಕುದುರೆ, ಬ್ಯಾಂಡ್ ವಾದ್ಯ, ರವೀಂದ್ರ ಗಿರಿಸಿರಿ ಕಲಾ ಜಾನಪದ ಕಲಾತಂಡ ಕನ್ಯಾನ ಅವರ ಕೊರಗರ ಡೋಲು ಕುಣಿತ, ಸುಶೀಲಾ ಮತ್ತು ಬಳಗ ಕಿನ್ನಿಗೋಳಿ ಅವರಿಂದ ಬುಡಕಟ್ಟು ಕಲಾಪ್ರದರ್ಶನ, ಗೀತಾ ಮತ್ತು ಬಳಗ ಕೋಡಿಕಲ್ ಅವರಿಂದ ಕೊರಗರ ಗಜಮೇಳ ನಡೆಯಿತು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಕುಮಾರ್ ಪೆರ್ನಾಜೆ (ಕೃಷಿ), ಶೇಖರ ಭಂಡಾರಿ (ಸಾಹಿತ್ಯ), ಬೊಂಡಾಲ ಸಚ್ಚಿದಾನಂದ ಶೆಟ್ಟಿ (ಶಿಕ್ಷಣ), ಪಿ.ಎಂ. ಹಸನಬ್ಬ ಮೂಡುಬಿದಿರೆ (ಸಂಗೀತ), ದಿನಕರ ಇಂದಾಜೆ (ಪತ್ರಿಕೋದ್ಯಮ), ಲಕ್ಷಣ ಕುಂದರ್ (ಪತ್ರಿಕೋದ್ಯಮ), ವಿದ್ವಾನ್ ಶ್ರಾವಣ್ ಉಳ್ಳಾಲ (ನೃತ್ಯ), ನಾಗೇಶ್ ಎ. (ಕ್ರೀಡೆ), ಮಾಸ್ಟರ್ ಮುಹಮ್ಮದ್ ಶಾಮಿಲ್ ಅರ್ಷದ್ (ಕ್ರೀಡೆ), ಜಾನ್ ಚಂದ್ರನ್ (ಲಲಿತಕಲೆ), ಸದಾಶಿವ ಅಮೀನ್ (ಲಲಿತಕಲೆ), ಚಂದ್ರಶೇಖರ ನಾಣಿಲ್ (ಸಮಾಜ ಸೇವೆ), ಡಾ.ಐ.ಶಶಿಕಾಂತ್ ಜೈನ್ (ಸಮಾಜ ಸೇವೆ-ಯೋಗ), ಶಂಕರ ಬಿ.ಶೆಟ್ಟಿ ವಿರಾರ್ (ಸಮಾಜ ಸೇವೆ), ಕುರ್ನಾಡು ಶಿವಣ್ಣ ಆಚಾರ್ಯ (ಜಾನಪದ), ಗೋಪಾಲ ಶಿಬರೂರು (ಜಾನಪದ), ಡಾ.ಮನೋರಮ ರಾವ್ (ವೈದ್ಯಕೀಯ), ಡಾ.ದಿನೇಶ್ ಕದಂ (ವೈದ್ಯಕೀಯ) ಅವರಿಗೆ ಮತ್ತು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಸುಳ್ಯ (ಸಮಾಜ ಸೇವೆ), ಬಿಲ್ಲವ ಸೇವಾ ಸಮಾಜ ಕಂಕನಾಡಿ ಗರೋಡಿ (ಸಮಾಜ ಸೇವೆ), ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಸುಲ್ತಾನ್ ಬತ್ತೇರಿ (ಸಮಾಜ ಸೇವೆ), ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ ಕದ್ರಿ (ಸಮಾಜ ಸೇವೆ), ತಣ್ಣೀರುಬಾವಿ ಮುಳುಗು ತಜ್ಞರ ತಂಡ (ಸಮಾಜ ಸೇವೆ), ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ (ಸಮಾಜ ಸೇವೆ), ಮದರ್ ಥೆರೆಸಾ ಹೋಂ ಫಾರ್ ದ ಡೈಯಿಂಗ್ ಡೆಸ್ಟಿಟ್ಯೂಸ್ ಫಳ್ನೀರ್ (ಸಮಾಜ ಸೇವೆ) ಸಂಸ್ಥೆಗಳ ಮುಖಂಡರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News