×
Ad

ನ್ಯೂಝಿಲೆಂಡ್ ವಿರುದ್ಧ ಟ್ವೆಂಟಿ-20: ಕೊನೆಯ ಓವರ್‌ನಲ್ಲಿ ರೋಚಕ ಜಯ ದಾಖಲಿಸಿದ ಪಾಕ್

Update: 2018-11-01 10:54 IST

ಅಬುಧಾಬಿ, ನ.1: ನ್ಯೂಝಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕೊನೆಯ ಓವರ್‌ನಲ್ಲಿ ರೋಚಕ ಜಯ ದಾಖಲಿಸಿದೆ.

ಪಾಕ್‌ನ ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಕೊನೆಯ ಓವರ್‌ನಲ್ಲಿ 17 ರನ್ ನೀಡಿದ್ದರೂ ತಂಡಕ್ಕೆ 2 ರನ್‌ಗಳ ರೋಚಕ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

  ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 149 ರನ್ ಗುರಿ ಪಡೆದ ನ್ಯೂಝಿಲೆಂಡ್‌ಗೆ ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ 6 ರನ್ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಅನುಭವಿ ದಾಂಡಿಗ ರಾಸ್ ಟೇಲರ್ ಬೌಂಡರಿ ಬಾರಿಸಲಷ್ಟೇ ಶಕ್ತರಾದರು. ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿ 2 ರನ್‌ನಿಂದ ಸೋಲೊಪ್ಪಿಕೊಂಡಿತು.

 ಸತತ 7ನೇ ಪಂದ್ಯವನ್ನು ಗೆದ್ದುಕೊಂಡಿರುವ ವಿಶ್ವದ ನಂ.1 ಟ್ವೆಂಟಿ-20 ತಂಡ ಪಾಕಿಸ್ತಾನ ಕಿವೀಸ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲ್ಲಿ 1-0 ಸಾಧಿಸಿದೆ. ಪಾಕ್ ತಂಡ ಈಗಾಗಲೇ ಆಸ್ಟ್ರೇಲಿಯ ವಿರುದ್ಧ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.

ಇದಕ್ಕೆ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ 6 ವಿಕೆಟ್‌ಗಳ ನಷ್ಟಕ್ಕೆ 148 ರನ್ ಗಳಿಸಿತು. ಮುಹಮ್ಮದ್ ಹಫೀಝ್ ಸರ್ವಾಧಿಕ ಸ್ಕೋರ್(45, 36 ಎಸೆತ, 5 ಬೌಂಡರಿ,1 ಸಿಕ್ಸರ್)ಗಳಿಸಿದರು. ಪಾಕ್ ತಂಡ ಕೊನೆಯ 10 ಓವರ್‌ಗಳಲ್ಲಿ 81 ರನ್ ಗಳಿಸಿತು. ನಾಯಕ ಸರ್ಫರಾಝ್ ಅಹ್ಮದ್(34,26 ಎಸೆತ, 3 ಬೌಂಡರಿ, 1 ಸಿಕ್ಸರ್)ತಂಡದ ಮೊತ್ತ ಹಿಗ್ಗಿಸಿದರು.

ನ್ಯೂಝಿಲೆಂಡ್ ಪರ ಟೇಲರ್ 26 ಎಸೆತಗಳಲ್ಲಿ ಔಟಾಗದೆ 42 ರನ್ ಗಳಿಸಿದರು. ಇದರಲ್ಲಿ 3 ಬೌಂಡರಿಗಳಿವೆ. ಕಿವೀಸ್ ಆರಂಭಿಕ ಕಾಲಿನ್ ಮುನ್ರೊ 42 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳ ಸಹಿತ 58 ರನ್ ಗಳಿಸಿ ಉತ್ತಮ ಆರಂಭವನ್ನೇ ನೀಡಿದರು.

ಹಸನ್ ಅಲಿ(3-35) ನೇತೃತ್ವದ ಪಾಕಿಸ್ತಾನದ ಬೌಲಿಂಗ್ ವಿಭಾಗ ಕಿವೀಸ್ ದಾಂಡಿಗರ ವೇಗಕ್ಕೆ ಕಡಿವಾಣ ಹಾಕಿದರು. ಗ್ಲೆನ್ ಫಿಲಿಪ್ಸ್(12), ಕಾಲಿನ್ ಡಿ ಗ್ರಾಂಡ್‌ಹೋಮ್(6) ಹಾಗೂ ನಾಯಕ ಕೇನ್ ವಿಲಿಯಮ್ಸನ್(11) ಅಲ್ಪ ಮೊತ್ತಕ್ಕೆ ಔಟಾದಾಗ ಕಿವೀಸ್ ಸ್ಕೋರ್ 89ಕ್ಕೆ4.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News