ರಿಯಾಯಿತಿ ನೀಡಲಿಲ್ಲವೆಂದು ಬಟ್ಟೆ ಅಂಗಡಿ ಸೇಲ್ಸ್ ಮ್ಯಾನ್ ಗಳನ್ನು ಗುಂಡಿಕ್ಕಿ ಕೊಂದ ಭೂಪ!
ವಾರಾಣಸಿ,ನ.1: ವಾರಾಣಸಿಯ ಮಾಲ್‌ವೊಂದರಲ್ಲಿರುವ ಬಟ್ಟೆ ಅಂಗಡಿಯ ಇಬ್ಬರು ಸೇಲ್ಸ್‌ಮ್ಯಾನ್‌ರನ್ನು ಡಿಸ್ಕೌಂಟ್ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಗುಂಡಿಟ್ಟು ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
ಬುಧವಾರ ಸಂಜೆ ಜೆಚ್‌ವಿ ಮಾಲ್‌ನಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮಾಲ್‌ನಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಇಬ್ಬರು ಗ್ರಾಹಕರು ಹಾಗೂ ಸೇಲ್ಸ್‌ಮ್ಯಾನ್‌ಗಳ ನಡುವೆ ಬಟ್ಟೆ ಮೇಲಿನ ರಿಯಾಯತಿಗೆ ಸಂಬಂಧಿಸಿ ವಾಗ್ವಾದ ನಡೆಯಿತು. ಆಗ ಓರ್ವ ಗ್ರಾಹಕ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಇಬ್ಬರು ಸೇಲ್ಸ್‌ಮ್ಯಾನ್‌ರನ್ನು ಗುಂಡಿಟ್ಟು ಸಾಯಿಸಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಮೃತಪಟ್ಟ ಸೇಲ್ಸ್‌ಮ್ಯಾನ್‌ಗಳನ್ನು ಸುನೀಲ್ ಹಾಗೂ ಗೋಪಿ ಎಂದು ಗುರುತಿಸಲಾಗಿದೆ. ಗೋಲು ಹಾಗೂ ವಿಶಾಲ್ ಎನ್ನುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರ ಪರಿಸ್ಥಿತಿಯೂ ಗಂಭೀರವಾಗಿದೆ.
ಸಂಜೆ ವೇಳೆ ಮಾಲ್‌ನಲ್ಲಿ ಹೆಚ್ಚಿನ ಜನರು ಶಾಪಿಂಗ್ ಮಾಡುತ್ತಿರುವಾಗಲೇ ಘಟನೆ ನಡೆದ ಕಾರಣ ಎಲ್ಲರೂ ಭಯಭೀತರಾಗಿದ್ದಾರೆ. ಘಟನೆಯ ನಡೆದ ಬಳಿಕ ಅಂಗಡಿ ಹಾಗೂ ಮಾಲ್ ಬಾಗಿಲನ್ನು ಮುಚ್ಚಲಾಗಿದ್ದು, ಸಿಸಿಟಿವಿ ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಸೆರೆಗೆ ಬಲೆ ಬೀಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.