ತೊಕ್ಕೊಟ್ಟು: ಮನೆಗೆ ನುಗ್ಗಿ ನಗ-ನಗದು ಕಳವು

Update: 2018-11-01 07:01 GMT

ಉಳ್ಳಾಲ, ನ.1: ಮನೆಯೊಂದಕ್ಕೆ ನುಗ್ಗಿದ ಕಳ್ಳರು ನಗ-ನಗದು ದೋಚಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಿಕಾ ರೋಡ್ ಬಿ. ಬ್ಲಾಕ್ ಬಳಿ ಬುಧವಾರ ತಡರಾತ್ರಿ ನಡೆದಿದೆ.

ನಿರ್ಮಲ ಬಡಾವಣೆ ನಿವಾಸಿ ನವೀನ್ ಗಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ನವೀನ್, ಪತ್ನಿ ಉಷಾ ಮತ್ತು ಮಗ ಚಿರಾಗ್‌ನೊಂದಿಗೆ ಬುಧವಾರ ರಾತ್ರಿ ಊಟ ಮುಗಿಸಿ ಒಂದೇ ಕೋಣೆಯಲ್ಲಿ ಮಲಗಿದ್ದರು. ಪಕ್ಕದ ಕೋಣೆಯಲ್ಲಿ ಉಷಾ ಅವರ ರ ತಾಯಿ ವಿಮಲಾ ಮಲಗಿದ್ದು, ಎರಡೂ ಕೋಣೆಗಳ ಬಾಗಿಲು ತೆರೆದಿತ್ತೆನ್ನಲಾಗಿದೆ. ಮನೆ ಹಿಂಬಾಗಿಲಿನ ಕಿಟಕಿಯ ಬಾಗಿಲು ತೆರೆದಿದ್ದು ಇದರ ಲಾಭ ಪಡೆದ ಕಳ್ಳರು ಕಿಟಕಿಯ ಮೂಲಕ ಬಾಗಿಲಿನ ಚಿಲಕ ಸರಿಸಿ ಒಳ ನುಗ್ಗಿದ್ದಾರೆ.

ನವೀನ್ ಮಲಗಿದ್ದ ಕೋಣೆಗೆ ಪ್ರವೇಶಿಸಿದ ಕಳ್ಳರು ಮೇಕಪ್ ಟೇಬಲ್ ಮೇಲಿಟ್ಟಿದ್ದ ಉಷಾ ಅವರ 6 ಪವನ್ ತೂಕದ ಕರಿಮಣಿ ಸರ, ಶೋಕೇಸ್‌ನಲ್ಲಿಟ್ಟಿದ್ದ 3 ಪವನ್ ತೂಕದ ಚಿನ್ನದ ಸರ, ಮತ್ತು ಉಷಾರವರ ಬ್ಯಾಗ್‌ನಲ್ಲಿದ್ದ 500 ರೂ. ಮತ್ತು ಮಗ ಚಿರಾಗ್ ಪರ್ಸನಲ್ಲಿದ್ದ 500 ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂದರ್ಭ ಬ್ಯಾಗನ್ನು ಮನೆ ಹೊರಗಿನ ಬಟ್ಟೆಯೊಗೆಯುವ ಕಲ್ಲಿನ ಮೇಲಿಡಲಾಗಿದೆ.

ಉಷಾ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಉದ್ಯೋಗಿಯಾಗಿದ್ದು, ಇಂದು ಬೆಳಗ್ಗೆ ಕೌಟುಂಬಿಕ ಕಾರ್ಯಕ್ರಮಕ್ಕೆ ಹೋಗಲಿದ್ದ ಕಾರಣ ಆಭರಣಗಳನ್ನು ಟೇಬಲ್ ಮತ್ತು ಶೋಕೇಸ್ ನಲ್ಲಿಯೇ ಇರಿಸಿ ಮಲಗಿದ್ದರು. ಚಿನ್ನಾಭರಣದೊಂದಿಗೆ ಇದ್ದ ರೋಲ್ಡ್-ಗೋಲ್ಡ್ ಬಳೆಯನ್ನು ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News