ಸಮುದ್ರದಲ್ಲಿ ಪತನಗೊಂಡ ಇಂಡೊನೇಷ್ಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ: ವರದಿ

Update: 2018-11-01 15:14 GMT

ಜಕಾರ್ತ, ನ.1: ಸೋಮವಾರ ಸಮುದ್ರದಲ್ಲಿ ಪತನಗೊಂಡು ಎಲ್ಲಾ 189 ಪ್ರಯಾಣಿಕರ ಸಾವಿಗೆ ಕಾರಣವಾದ ಇಂಡೊನೇಷ್ಯಾದ ಲಯನ್ ಏರ್ ಜೆಟ್ ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ದೇಶದ ಮುಳುಗು ತಜ್ಞರು ಸಮುದ್ರದಲ್ಲಿ ಪತ್ತೆ ಹಚ್ಚಿ ಅದನ್ನು ತೀರಕ್ಕೆ ತೆಗೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ.

ಜಕಾರ್ತದಿಂದ ಪಂಗ್ಕಲ್ ಪಿನಂಗ್ ಪಟ್ಟಣಕ್ಕೆ ತೆರಳುತ್ತಿದ್ದ ವಿಮಾನವು ನಿಲ್ದಾಣದಿಂದ ಹೊರಟ 13 ನಿಮಿಷಗಳಲ್ಲಿಯೇ ಸಂಪರ್ಕ ಕಳೆದುಕೊಂಡು ಪತನಗೊಳ್ಳಲು ನಿಖರ ಕಾರಣಗಳ ಬಗ್ಗೆ ಈ ಬ್ಲ್ಯಾಕ್ ಬಾಕ್ಸ್ ಸುಳಿವು ನೀಡಲಿದೆ.

ಸಾಗರ ತಳದಲ್ಲಿ ಕೆಸರಿನಲ್ಲಿ ಅಗೆದಾಗ ಈ ಕೇಸರಿ ಬಣ್ಣದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು ಅದಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು  ತಿಳಿದು ಬಂದಿದೆ. ಬ್ಲ್ಯಾಕ್ ಬಾಕ್ಸ್ ನಲ್ಲಿ ವಿಮಾನದ ಡಾಟಾ ರೆಕಾರ್ಡರ್ ಅಥವಾ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ಇರುತ್ತದೆ.

ಇಲ್ಲಿಯ ತನಕ ವಿಮಾನದ ಇತರ ಅವಶೇಷಗಳ ಕೆಲ ಸಣ್ಣ ತುಂಡುಗಳು ಮಾತ್ರ ಪತ್ತೆಯಾಗಿವೆ. ವಿಮಾನದ ಹೊರಭಾಗದ ಒಂದು ತುಂಡನ್ನು ಅಂತರ್ಜಲ ಡ್ರೋನ್ ಪತ್ತೆ ಹಚ್ಚಿರುವ ಸಾಧ್ಯತೆಯಿದ್ದು, ಹಾಗೇನಾದರೂ ಆದರೆ ಅದನ್ನು ಕ್ರೇನ್ ಸಹಾಯದಿಂದ ಎತ್ತಲಾಗುವುದು ಹಾಗೂ ಅದರೊಳಗೆ ಹಲವು ಪ್ರಯಾಣಿಕರ ಮೃತದೇಹಗಳು ಸಿಲುಕಿರುವ ಸಾಧ್ಯತೆಯಿದೆ ಎಂದು ಇಂಡೊನೇಷ್ಯಾದ ರಕ್ಷಣಾ ತಂಡದ ಮುಖ್ಯಸ್ಥರಾದ ಮುಹಮ್ಮದ್ ಸ್ಯಾಗಿ ತಿಳಿಸಿದ್ದಾರೆ.

ವಿಮಾನದ ಪ್ರಯಾಣಿಕ ಭಾಗ ಇನ್ನೂ ಪತ್ತೆಯಿಲ್ಲ

‘ಲಯನ್ ಏರ್’ ವಿಮಾನದ ಅವಶೇಷಗಳಿಗಾಗಿ ಶೋಧ ನಡೆಸುತ್ತಿರುವ ತಂಡವು ಬುಧವಾರ ಸಮುದ್ರ ತಳದಲ್ಲಿ ಕೆಲವು ಅವಶೇಷಗಳು ಮತ್ತು ಪ್ರಯಾಣಿಕರಿಗೆ ಸೇರಿದ ವಸ್ತುಗಳನ್ನು ಪತ್ತೆಹಚ್ಚಿದೆ ಎಂದು ಇಂಡೋನೇಶ್ಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಆದಾಗ್ಯೂ, ವಿಮಾನದ ಪ್ರಯಾಣಿಕ ಭಾಗವು ಇನ್ನೂ ಪತ್ತೆಯಾಗಿಲ್ಲ.

ವಿಮಾನದ ದೇಹವನ್ನು ಶೀಘ್ರವೇ ಪತ್ತೆಹಚ್ಚುವ ವಿಶ್ವಾಸವನ್ನು ಶೋಧ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News