ಟೀಮ್ ಇಂಡಿಯಾ ಮೆನುವಿನಿಂದ ಬೀಫ್ ತೆಗೆಯಲು ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಬಿಸಿಸಿಐ ಮನವಿ
ಅಹ್ಮದಾಬಾದ್, ನ.1: ಮುಂಬರುವ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸಕ್ಕೆ ಎರಡು ವಾರ ಮುಂಚಿತವಾಗಿಯೇ ತೆರಳಲಿರುವ ಟೀಮ್ ಇಂಡಿಯಾ ತಂಡದ ಮೆನು ಪಟ್ಟಿಯಿಂದ ಬೀಫ್‌ನ್ನು ತೆಗೆಯುವಂತೆ ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಮನವಿ ಮಾಡಿದೆ ಎಂದು ವರದಿಯಾಗಿದೆ.
ಕಳೆದ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ತಂಡದ ಮಧ್ಯಾಹ್ನದ ಭೋಜನದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಾಕಿತ್ತು. ಭೋಜನದಲ್ಲಿ ಬೀಫ್‌ನ ಖಾದ್ಯವೂ ಇತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತಿದ್ದಕ್ಕಿಂತ ಹೆಚ್ಚಾಗಿ ಆಟಗಾರರು ಬೀಫ್ ಖಾದ್ಯದೊಂದಿಗೆ ಕಾಣಿಸಿಕೊಂಡಿದ್ದಕ್ಕೆ ಕೋಪಗೊಂಡಿದ್ದರು.
ಹಾಗಾಗಿ ಈ ಬಾರಿ ಬಿಸಿಸಿಐ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು, ಆಟಗಾರರಿಗೆ ಬೀಫ್ ಖಾದ್ಯ ಒದಗಿಸದಂತೆ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ.
ಭಾರತ ನ.21 ರಿಂದ ಜ.18ರ ತನಕ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸದ ವೇಳೆ 3 ಟ್ವೆಂಟಿ-20, 4 ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯಕ್ಕೆ ಪ್ರಯಾಣಿಸಲಿರುವ ಬಿಸಿಸಿಐನ ತಪಾಸಣಾ ತಂಡ ಆಟಗಾರರ ಸುಗಮ ಪ್ರಯಾಣ, ಪ್ರಾಕ್ಟೀಸ್ ಸ್ಥಳ ಹಾಗೂ ಆಹಾರ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಿದೆ.