ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ರಾಹುಲ್ ದ್ರಾವಿಡ್ ಅಧಿಕೃತ ಸೇರ್ಪಡೆ
ತಿರುವನಂತಪುರ, ನ.1: ಭಾರತದ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಗುರುವಾರ ಅಧಿಕೃತವಾಗಿ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಸೇರ್ಪಡೆಯಾಗಿದ್ದಾರೆ.
ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವೆ ಗುರುವಾರ ಐದನೇ ಹಾಗೂ ಅಂತಿಮ ಏಕದಿನ ಪಂದ್ಯ ಆರಂಭಕ್ಕೆ ಮೊದಲು ನಡೆದ ಸರಳ ಸಮಾರಂಭದಲ್ಲಿ ಭಾರತದ ಇನ್ನೋರ್ವ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಅವರು ದ್ರಾವಿಡ್‌ಗೆ ಕ್ಯಾಪ್ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ದ್ರಾವಿಡ್ ಪ್ರಸ್ತುತ ಭಾರತದ ಅಂಡರ್-19 ಹಾಗೂ ಭಾರತ ಎ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಅಮೋಘ ಸಾಧನೆಯನ್ನು ಗುರುತಿಸಿ ಈ ವರ್ಷದ ಜುಲೈನಲ್ಲಿ ಡುಬ್ಲಿನ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ದ್ರಾವಿಡ್, ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಹಾಗೂ ಇಂಗ್ಲೆಂಡ್‌ನ ನಿವೃತ್ತ ಮಹಿಳಾ ವಿಕೆಟ್‌ಕೀಪರ್ ಕ್ಲೈರ್ ಟೇಲರ್‌ರನ್ನು ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಐಸಿಸಿ ಘೋಷಣೆ ಮಾಡಿತ್ತು.
ದ್ರಾವಿಡ್ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರ್ಪಡೆಯಾದ ಭಾರತದ ಐದನೇ ಆಟಗಾರನಾಗಿದ್ದಾರೆ. ಭಾರತದ ಮಾಜಿ ನಾಯಕರಾದ ಬಿಷನ್ ಸಿಂಗ್ ಬೇಡಿ, ಗವಾಸ್ಕರ್ ಹಾಗೂ ಕಪಿಲ್‌ದೇವ್ 2009ರಲ್ಲಿ ಹಾಗೂ ಅನಿಲ್ ಕುಂಬ್ಳೆ 2015ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು.
‘‘ಐಸಿಸಿ ಹಾಲ್ ಫೇಮ್ ಗೌರವಕ್ಕೆ ಆಯ್ಕೆಯಾಗಿರುವುದು ಮಹಾ ಗೌರವ. ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ತನ್ನ ಹೆಸರು ಇರುವುದು ನನ್ನ ಕನಸಾಗಿತ್ತು. ಇಂತಹ ಗುರುತಿಸುವಿಕೆ ಎಲ್ಲ ಆಟಗಾರರಿಗೆ ಖುಷಿ ತರುತ್ತದೆ’’ ಎಂದು ದ್ರಾವಿಡ್ ಹೇಳಿದ್ದಾರೆ.
ದ್ರಾವಿಡ್ ಭಾರತದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 23,208 ರನ್ ಗಳಿಸಿದ್ದು ಇದರಲ್ಲಿ 48 ಶತಕ ಹಾಗೂ 146 ಅರ್ಧಶತಕಗಳಿವೆ. ದ್ರಾವಿಡ್ 45.71ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.