ಐದನೇ ಏಕದಿನ: ಭಾರತಕ್ಕೆ 9 ವಿಕೆಟ್ ಜಯ: ಸರಣಿ ಕೈವಶ

Update: 2018-11-01 11:50 GMT

ತಿರುವನಂತಪುರ, ನ.1: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜರ ಸ್ಪಿನ್ ಮೋಡಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಅವರ 37ನೇ ಅರ್ಧಶತಕದ ಕೊಡುಗೆ ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್ ತಂಡ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ವಿರಾಟ್ ಕೊಹ್ಲಿ ಪಡೆ 5 ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಸ್ವದೇಶದಲ್ಲಿ ಸತತ ಆರನೇ ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ.

ಇಲ್ಲಿ ಗುರುವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಜಯಿಸಿದ ವೆಸ್ಟ್‌ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.  ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(4-34)ನೇತೃತ್ವದ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡ ಕೇವಲ 104 ರನ್ ಗೆ ಆಲೌಟಾಯಿತು. 

ಗೆಲ್ಲಲು 105 ರನ್  ಸುಲಭ ಗುರಿ ಪಡೆದ ಭಾರತ ಎರಡನೇ ಓವರ್‌ನಲ್ಲಿ ಶಿಖರ್ ಧವನ್(6) ವಿಕೆಟನ್ನು ಕಳೆದುಕೊಂಡಿತು. ಆಗ 2ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 99 ರನ್ ಸೇರಿಸಿದ ರೋಹಿತ್ (ಔಟಾಗದೆ 63 ರನ್,56 ಎಸೆತ,5 ಬೌಂಡರಿ, 4 ಸಿಕ್ಸರ್)ಹಾಗೂ ಕೊಹ್ಲಿ(ಔಟಾಗದೆ 33,29 ಎಸೆತ, 6 ಬೌಂಡರಿ)ತಂಡಕ್ಕೆ 14.5 ಓವರ್‌ಗಳಲ್ಲಿ ಗೆಲುವು ತಂದುಕೊಟ್ಟರು.

ರೋಹಿತ್ ಕೇವಲ 45 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 50 ರನ್ ಪೂರೈಸಿದರು. ವಿಂಡೀಸ್ 104/10: ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ವಿಂಡೀಸ್ ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ಆರಂಭಿಕ ಆಟಗಾರ ಪೊವೆಲ್(0) ವಿಕೆಟನ್ನು ಕಳೆದುಕೊಂಡಿತು. ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ವಿಫಲವಾಗಿ 31.5 ಓವರ್‌ಗಳಲ್ಲಿ 104 ರನ್‌ಗೆ ಆಲೌಟಾಯಿತು.

ನಾಯಕ ಜೇಸನ್ ಹೋಲ್ಡರ್(25) ಹಾಗೂ ಮರ್ಲಾನ್ ಸ್ಯಾಮುಯೆಲ್ಸ್(24), ಆರ್.ಪೊವೆಲ್(16) ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಬೇಗನೆ ಔಟಾಗಿ ನಿರಾಸೆಗೊಳಿಸಿದರು.

ಭಾರತದ ಪರ ರವೀಂದ್ರ ಜಡೇಜ(4-34) ಯಶಸ್ವಿ ಬೌಲರ್ ಎನಿಸಿಕೊಂಡರು. ಜಸ್‌ಪ್ರಿತ್ ಬುಮ್ರಾ(2-11) ಹಾಗೂ ಖಲೀಲ್ ಅಹ್ಮದ್(2-29)ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News