ಲಲಿತಾ ನಾಯಕ್‌ಗೆ ಬೆದರಿಕೆ: ಪಿಎಫ್‌ಐ ಖಂಡನೆ
ಮಂಗಳೂರು, ನ.1: ಪ್ರಗತಿಪರ ಚಿಂತಕಿ, ಮಾನವಹಕ್ಕು ಹೋರಾಟಗಾರ್ತಿ, ಮಾಜಿ ಸಚಿವೆ ಬಿ.ಟಿ.ಲಲಿತ ನಾಯಕ್‌ಗೆ ಬೆದರಿಕೆ ಕರೆ ಬಂದಿರುವುದನ್ನು ಖಂಡಿಸಿರುವ ಪಿಎಫ್‌ಐ ರಾಜ್ಯ ಸಮಿತಿಯು, ರಾಜ್ಯ ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರಿಗೆ ಭದ್ರತೆ ಕಲ್ಪಿಸಬೇಕು ಎಂದು ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುರ್ರಝಾಕ್ ಕೆಮ್ಮಾರ ಒತ್ತಾಯಿಸಿದ್ದಾರೆ.
100ಕ್ಕೂ ಅಧಿಕ ಬಾರಿ ಒಂದೇ ಮೊಬೈಲ್ ಸಂಖ್ಯೆಯಿಂದ ಅನಾಮಧೇಯ ಕರೆ ಬಂದಿರುವ ಬಗ್ಗೆ ಲಲಿತಾ ನಾಯಕ್ ಸಂಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಲ್ಬುರ್ಗಿ, ಗೌರಿ ಲಂಕೇಶ್‌ರಂತಹ ಮಾನವಹಕ್ಕು ಹೋರಾಟಗಾರರನ್ನು ಹತ್ಯೆ ಗೈದಿರುವಾಗ ಪೊಲೀಸ್ ಇಲಾಖೆ ಇದನ್ನು ಲಘುವಾಗಿ ಪರಿಗಣಿಸಿರುವುದು ಖಂಡನೀಯ.
ಮಾನವಹಕ್ಕು ಹೋರಾಟಗಾರರನ್ನು ಹತ್ಯೆಗೈಯ್ಯುವ ನಿಗೂಢ ಸಂಚಿನಲ್ಲಿ ಭಾಗಿಯಾಗಿರುವ ಬಹಳಷ್ಟು ಮಂದಿ ಆರೋಪಿಗಳು ಸನಾತನ ಸಂಸ್ಥೆಯೊಂದಿಗೆ ಸಂಬಂಧವುಳ್ಳವರೆಂದು ವಿಶೇಷ ತನಿಖಾ ತಂಡ ತಿಳಿಸಿದೆ. ಇದೀಗ ಹಿರಿಯ ಹೋರಾಟಗಾರ್ತಿ ಲಲಿತಾ ನಾಯಕ್‌ರಿಗೂ ಬೆದರಿಕೆ ಕರೆ ಬಂದಿರುವ ಪ್ರಕರಣವು ಲಘುವಾಗಿ ಪರಿಗಣಿಸಬಾರದು. ನಾಡಿನ ಪ್ರಗತಿಪರ ಚಿಂತಕರನ್ನು ಉಳಿಸಿಕೊಳ್ಳುವ ಮತ್ತು ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವುದು ಆಡಳಿತ ವ್ಯವಸ್ಥೆಯ ಜವಾಬ್ಧಾರಿಯಾಗಿದೆ. ಆದ್ದರಿಂದ ಮತ್ತೊಮ್ಮೆ ಕೊಲೆಗಡುಕರು ರಾಜ್ಯದಲ್ಲಿ ವಿಜೃಂಭಿಸದಂತೆ ನೋಡಿಕೊಳ್ಳುವುದು ಮತ್ತು ಬೆದರಿಕೆಗೆ ಒಳಗಾದ ವ್ಯಕ್ತಿಗಳಿಗೆ ನಿರ್ಲಕ್ಷ ತೋರದೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಎಂದು ಪಿಎಫ್‌ಐ ಆಗ್ರಹಿಸಿದೆ.