ಕನ್ನಡ ಭಾಷೆ ಬೆಳೆಸಲು ವಿವಿ ಯೋಜನೆ ರೂಪಿಸಿದೆ: ಡಾ.ಸತೀಶ್ ಕುಮಾರ್
ಉಳ್ಳಾಲ, ನ. 1: ಕನ್ನಡ ಭಾಷೆ ಕೆಳ ಮಟ್ಟದ್ದಾಗಬಾರದು ಎನ್ನುವ ನೆಲೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಹೇಳಿದರು.
ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ ಅಧೀನದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಆಸ್ಪತ್ರೆ ವತಿಯಿಂದ ಗುರುವಾರ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು.
ಕನ್ನಡಿಗರು ಎಷ್ಟೇ ಕಷ್ಟ ಬಂದರೂ ಛಲ ಬಿಡುವುದಿಲ್ಲ ಎನ್ನುವುದಕ್ಕೆ ಧ್ವಜ ಬಣ್ಣ ಸಾಕ್ಷಿ. ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆ ಹೆಚ್ಚು ಬಳಕೆಯಲ್ಲಿದ್ದರೂ ನಾಡಿನ ಭಾಷೆ ಕಡಿಗಣಿಸಿಲ್ಲ. ವಿವಿಯಲ್ಲಿ ಕನ್ನಡ ಸಿಬ್ಬಂದಿ ನೇಮಕ, ಕನ್ನಡೇತರರಿಗೆ ಭಾಷೆ ಕಲಿಸುವಿಕೆ, ಕನ್ನಡ ತುಳು ಇಂಗ್ಲಿಷ್ ಡಿಕ್ಷಿನರ್ ತಯಾರಿ ಸಹಿತ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ವಿವಿಧ ವಿಭಾಗದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ವಿವಿ ಬದ್ಧ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಶಿವಾನಂದ ಪ್ರಭು, ನಿಟ್ಟೆ ವಿವಿ ಕುಲಸಚಿವೆ ಡಾ.ಇಂದ್ರಾಣಿ ಕರುಣಾಸಾಗರ್, ಕೆ.ಎಸ್.ಹೆಗ್ಡೆ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಹಿರೇಮಠ, ಕ್ಷೇಮಾ ವೈಸ್ ಡೀನ್ ಡಾ.ಪಿ.ಎಸ್. ಪ್ರಕಾಶ್, ಡಾ.ಜೆ.ಪಿ.ಶೆಟ್ಟಿ, ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಡಾ.ಯು.ಎಸ್.ಕೃಷ್ಣ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಸುಮಲತಾ ಶೆಟ್ಟಿ ಸ್ವಾಗತಿಸಿದರು. ಯಶೋಧ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ 40 ಮಂದಿ ವಿದ್ಯಾರ್ಥಿಗಳು ಸೇರಿಕೊಂಡು ನಾಡಗೀತೆಯನ್ನು ಸಾಮೂಹಿಕವಾಗಿ ಹಾಡಿದರು.