×
Ad

ಅಕ್ರಮ ದಂಧೆ ನಡೆಸುವ ರೆಡ್ಡಿಗೆ ಮಾನವೀಯತೆಯಿಲ್ಲ: ಭೋಜೇಗೌಡ

Update: 2018-11-01 20:13 IST

ಉಡುಪಿ, ನ.1: ಅಕ್ರಮ ದಂಧೆ ನಡೆಸುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮಾನವೀಯತೆಯೇ ಇಲ್ಲ. ಅವರಿಗೆ ನೈಜ ರಾಜಕೀಯವೂ ಗೊತ್ತಿಲ್ಲ. ಅಂತಹ ಸಮಾಜಘಾತಕರಿಂದ ಯಾವ ಸಮಾಜ ಸೇವೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಕಿಡಿಕಾರಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುವಾಗ, ಜನಾರ್ದನ ರೆಡ್ಡಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಕುರಿತು ವೈಯಕ್ತಿಕ ನೆಲೆಯಲ್ಲಿ ಮಾಡಿದ ಟೀಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

ಮರಳು ಸಮಸ್ಯೆ ವಿಚಾರದಲ್ಲಿ ಮುಖ್ಯಮಂತ್ರಿಗಳು ಕರಾವಳಿ ಜನಪ್ರತಿನಿಧಿ ಗಳ ಜೊತೆ ಎರಡು ಸುತ್ತಿನ ಚರ್ಚೆ ನಡೆಸಿದ್ದಾರೆ. ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಆದೇಶ ನೀಡಿದ್ದರು. ಈ ಬಗ್ಗೆ ಬಿಜೆಪಿಯವರಿಗೆ ಸಂಪೂರ್ಣ ಮಾಹಿತಿ ಇದೆ. ಆದರೂ ಅವರು ಈ ವಿಷಯದಲ್ಲಿ ರಾಜಕೀಯ ಮಾಡುತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನಿನ್ನೆ ಹೇಳಿಕೆಯನ್ನು ಉದಾಹರಿಸಿ, ಮುಖ್ಯಮಂತ್ರಿಗೆ ಉಡುಪಿ ಜಿಲ್ಲಾಧಿಕಾರಿ ಯನ್ನು ಹದ್ದುಬಸ್ತಿನಲ್ಲಿಡಲು ಶಕ್ತಿ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಇದು ಎಷ್ಡು ಸರಿ? ಜನರನ್ನು ತಪ್ಪು ದಾರಿಗೆ ಎಳೀಬೇಡಿ. ಸಿಎಂ ನಿರ್ಧಾರ ತೆಗೆದುಕೊಳ್ಳುವಾಗ ಚುನಾವಣಾ ನೀತಿ ಸಂಹಿತೆಯಿತ್ತು. ಅದು ಮುಗಿದ ಬಳಿಕ ಅವರು ಖಚಿತವಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಮರಳುಗಾರಿಕೆ ವಿಷಯದಲ್ಲಿ ರಾಜಕೀಯ ಮಾಡಬೇಡಿ. ನಮಗೆ ಸಮಸ್ಯೆಗೆ ಪರಿಹಾರ ಸಿಗೋದು ಮುಖ್ಯ ಎಂದ ಬೋಜೇಗೌಡ, ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ, ಆಡುವ ಮಾತಿನ ಮೇಲೆ ಎಚ್ಚರವಿರಲಿ ಎಂದು ಅವರು ಕೋಟ ಶ್ರೀನಿವಾಸ ಪೂಜಾರಿಯನ್ನುದ್ದೇಶಿಸಿ ನುಡಿದರು.

ಇಲ್ಲಿ ರಾಜಕೀಯ ಹಸ್ತಕ್ಷೇಪ ಬೇಡ. ಜನರ ಸಮಸ್ಯೆಗೆ ಪರಿಹಾರ ಮುಖ್ಯ. ನಿಮ್ಮಂತೆ ನಮಗೂ ಜವಾಬ್ದಾರಿ ಇದೆ. ಅದನ್ನು ನಾವು ಖಂಡಿತ ಸಮರ್ಥವಾಗಿ ನಿಭಾಯಿಸುತ್ತೇವೆ. ಮರಳುಗಾರಿಕೆ ಸಮಸ್ಯೆ ನಿವಾರಣೆಯಲ್ಲಿ ಕೇಂದ್ರ ಸರಕಾರಕ್ಕೂ ಜವಾಬ್ದಾರಿ ಇದೆ. ಸಿಆರ್‌ಝಡ್- ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ನಿಷೇಧ ಮಾಡಿದ್ದು ಯಾರು? ಹೊಸದಾಗಿ ಪ್ರದೇಶಗಳು ಸೇರ್ಪಡೆಗೊಂಡಿದ್ದು ಹೇಗೆ? ಇದರಲ್ಲಿ ಕೇಂದ್ರದ ಪಾತ್ರವಿದೆ. ಜಿಲ್ಲಾಧಿಕಾರಿ ಯನ್ನು ದೂಷಿಸುವಾಗ ಕೇಂದ್ರದ ಪಾತ್ರ ಏನು ಎಂಬುದು ತಿಳಿದುಕೊಳ್ಳ ಬೇಕು ಎಂದರು.

ಕೇಂದ್ರದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸದೇ, ಇದರಲ್ಲಿ ರಾಜಕೀಯ ಬೆರೆಸಿ ಮಾತನಾಡಬೇಡಿ. 2011ರ ಮೊದಲು ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತಿದ್ದ 93 ಮಂದಿ ಈಗಾಗಲೇ ಅನುಮತಿ ನೀಡಲಾಗಿದೆ. ಹೀಗಿದ್ದರೂ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಸುತ್ತಿ ದ್ದೀರಿ. ಚುನಾವಣೆ ಮುಗಿದ ತಕ್ಷಣ ಸಿಎಂ ಈ ಸಂಬಂಧ ಇನ್ನೊಂದು ಸಭೆ ಕರೆಯಲಿದ್ದಾರೆ ಎಂದು ಬೋಜೇಗೌಡ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News