ಬಿಜೆಪಿ ಅಧಿಕಾರದಲ್ಲಿದ್ದಾಗ ದ.ಕ. ಜಿಲ್ಲೆಯಲ್ಲಿ ಮರಳು ಸಮಸ್ಯೆ ಸೃಷ್ಟಿಯಾಗಿದೆ: ರಮಾನಾಥ ರೈ
ಬಂಟ್ವಾಳ, ನ. 2: 94ಸಿ ಯೋಜನೆ ಜಾರಿ ಮಾಡಲು ಯೋಗ್ಯತೆ ಇಲ್ಲದವರು ಹಕ್ಕುಪತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಅದಲ್ಲದೆ, ಬಿಜೆಪಿ ಅಧಿಕಾರ ದಲ್ಲಿದ್ದಾಗ ಜಿಲ್ಲೆಯಲ್ಲಿ ಮರಳು ಸಮಸ್ಯೆ ಸೃಷ್ಟಿಯಾಗಿದ್ದು, ಈಗ ಅವರೇ ಪ್ರತಿಭಟನೆಗೆ ಮುಂದಾಗಿರುವುದು ದುರದೃಷ್ಟಕರ ಎಂದು ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿವವರಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ನೀತಿ ಜಾರಿಗೆ ತನ್ನಷ್ಟ ಪ್ರಯತ್ನ ಯಾರು ಮಾಡಿಲ್ಲ. ಗಣಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರು ಈ ಇಲಾಖೆಯಿಂದ ಹೋಗದೆ ಮರಳು ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಇವರಲ್ಲಿ ಹಲವು ಬಾರಿ ಜಿಲ್ಲೆಯ ಮರಳು ಸಮಸ್ಯೆಯನ್ನು ತರಲಾಗಿತ್ತಾದರೂ ಯಾವುದೇ ಸ್ಪಂದನ ನೀಡಲಿಲ್ಲ. ಇವರು ಇಲ್ಲಿಂದ ಹೋಗದ ಹೊರತು ಮರಳು ಸಮಸ್ಯೆ ಮುಗಿಯುವುದಿಲ್ಲ ಎಂದರು.
ನಿಗದಿಯಾಗಿದ್ದ ಕಾರ್ಯಕ್ರಮ ತಡೆಯಲು ತಾನು ಹೇಳಿಲ್ಲ: ರೈ
ಎರಡು ದಿನಗಳ ಹಿಂದೆ ಸರಪಾಡಿ, ಮಣಿನಾಲ್ಕೂರು ಗ್ರಾಮಗಳ ಹಕ್ಕುಪತ್ರ ವಿತರಣೆಯಲ್ಲಾದ ಗೊಂದಲಕ್ಕೆ ಪ್ರತಿಕ್ರಿಯಿಸಿದ ಅವರು, ರಮಾನಾಥ ರೈ ಕೀಳು ಮಟ್ಟದ ರಾಜಕೀಯ ಮಾಡುವವನಲ್ಲ. ನವಂಬರ್ ಮೊದಲ ವಾರದಲ್ಲಿ ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಬಾಕಿ ಉಳಿದಿರುವ ಎಲ್ಲ ಹಕ್ಕುಪತ್ರಗಳ ವಿತರಣೆಗೆ ವ್ಯವಸ್ಥೆಗೊಳಿಸುವಂತೆ ಅಧಿಕಾರಿಗಳಿಗೆ ಕರೆಮಾಡಿ ಸೂಚಿಸಿದ್ದೇನೆ. ಆದರೆ, ನಿಗದಿಯಾಗಿದ್ದ ಕಾರ್ಯಕ್ರಮ ತಡೆಯಲು ತಾನು ಹೇಳಿಲ್ಲ. ಅಧಿಕಾರಿಗಳ ತಪ್ಪು ಮಾಹಿತಿಯಿಂದ ತನ್ನ ಮೇಲೆ ತಪ್ಪಾಭಿಪ್ರಾಯ ಬಂದಿದೆ. ಬಿಜೆಪಿ ಇದನ್ನೇ ತನ್ನ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದರು.
ನಾನು ಸಚಿವನಾಗಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿ, ಕಂದಾಯ ಸಚಿವರನ್ನು ಕರೆಸಿ 94ಸಿ ಹಕ್ಕಪತ್ರ ವಿತರಿಸಲಾಗಿದೆ. ಹಕ್ಕುಪತ್ರವನ್ನು ಶಾಸಕರೇ ವಿತರಿಸಬೇಕೆಂಬ ಯಾವ ನಿಯಮವು ಇಲ್ಲ ಎಂದರು.
ಅಪಪ್ರಚಾರವೇ ಬಿಜೆಪಿ ಉದ್ಯೋಗ
ಅಪಪ್ರಚಾರ ಮಾಡುವುದೇ ಬಿಜೆಪಿಯವರ ಉದ್ಯೋಗ. ಬಡವರಿಗೆ ತೊಂದರೆ ಕೊಡುವ ಕೆಲಸ ತಾನೆಂದು ಮಾಡುವುದಿಲ್ಲ. ತಾನು ಸಚಿವನಾಗಿದ್ದಾಗ, ಕ್ಷೇತ್ರದ ಮತದಾರರಲ್ಲದ ರಾಜೇಶ್ ನಾಯ್ಕ್ ಹಾಗೂ ಜನಪ್ರತಿನಿಧಿಯಲ್ಲದ ಪದ್ಮನಾಭ ಕೊಟ್ಟಾರಿ ಅವರು ಕೇಂದ್ರ ಸರಕಾರದ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್, ಸ್ಟೌವ್ ವಿತರಣೆಯ ಸಂದರ್ಭವೇ ತಡೆವೊಡ್ಡಲು ಅವಕಾಶವಿತ್ತು. ಆದರೆ, ತಾನು ಇಂತಹ ಚಿಲ್ಲರೆ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಸ್ಪರ್ಧಿಸಲಿದೆ
ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಸ್ಪರ್ಧಿಸಲಿದೆ. ಚುನಾವಣಾ ಪೂರ್ವದಲ್ಲಿ ತಿಳಿಸಿದಂತೆ ಕಾಂಗ್ರೆಸ್ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಪ.ಜಾತಿಗೆ ಪ್ರಕಟವಾದ ಮೀಸಲಾತಿಗೆ ಬಿಜೆಪಿ ಕೋಟ್9 ಮೋರೆ ಹೋಗಿದ್ದು. ದುರ್ಬಲ ವರ್ಗದವರನ್ನು ಅಧಿಕಾರ ವಂಚಿತರ ನ್ನಾಗಿಸುವುದೇ ಅವರ ಅಜೆಂಡ ಎಂದರು.
ಮೌಲ್ಯಮಾಪನಕ್ಕೆ ಇನ್ನಷ್ಟು ಸಮಯವಿದೆ
ಸಂಗಬೆಟ್ಟು ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಧಾನಸಭಾ ಚುನಾವಣೆ ನಡೆದು ಕಳೆದ ಐದು ತಿಂಗಳಿನಲ್ಲಿ ಸಂಗಬೆಟ್ಟು ಉಪಚುನಾವಣೆಯಲ್ಲಿ 700 ಹಾಗೂ ಪುರಸಭಾ ಚುನಾವಣೆಯಲ್ಲಿ 1,500 ಮತಗಳನ್ನು ಹೆಚ್ಚು ಪಡೆದಿದೆ. ಜನರ ಮೌಲ್ಯಮಾಪನಕ್ಕೆ ಇನ್ನಷ್ಟು ಸಮಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿಕುಂದರ್, ಸುದೀಪ್ ಶೆಟ್ಟಿ ಮಾಣಿ, ಮಾಜಿ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಅಲಿ, ಹಿರಿಯರಾದ ಬಿ.ಎಚ್.ಖಾದರ್, ಬಿ.ಕೆ.ಇದ್ದಿನಬ್ಬ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಿಪಂ ಸದಸ್ಯ ಪದ್ಮಶೇಖರ ಜೈನ್, ಪಕ್ಷದ ಮುಖಂಡರಾದ ಪದ್ಮನಾಭ ರೈ, ಸಂಜೀವ ಪೂಜಾರಿ, ಜನಾರ್ದನ ಚಂಡ್ತಿಮಾರ್ ಮೊದಲಾದವರಿದ್ದರು.