ನ.5: ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಪ್ರತಿಭಟನೆ
ಮಂಗಳೂರು, ನ. 2: ನಗರ ಹೊರವಲಯದ ಎಂಆರ್‌ಪಿಎಲ್ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಗಳ ಮೂಲಕ ಸುಮಾರು 1011 ಎಕರೆ ಜಮೀನನ್ನು ಮತ್ತೆ ಸ್ವಾಧೀನಪಡಿಸಲು ಮುಂದಾಗಿರುವುದನ್ನು ಖಂಡಿಸಿ ನ.5ರಂದು ಬೆಳಗ್ಗೆ 10ಗಂಟೆಗೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ವಕ್ತಾರ ಟಿ.ಆರ್.ಭಟ್ ತಿಳಿಸಿದ್ದಾರೆ.
ನಗರದ ಸಿಬಿಒಒ ಹಾಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಅಂದು ಜಿಲ್ಲಾಧಿಕಾರಿಗಳ ಸಮ್ಮುಖ ಭೂಮಿಯ ಬೆಲೆ ನಿಗದಿ ಸಭೆಯನ್ನೂ ಕೂಡಾ ಆಯೋಜಿಸಲಾಗಿದೆ. ಇದನ್ನು ಅನೇಕ ಜನಪರ, ಪರಿಸರ ಪ್ರೇಮಿ ಸಂಘಟನೆಗಳು, ಮೀನುಗಾರರು, ಕೃಷಿಭೂಮಿಯನ್ನು ಅವಲಂಬಿಸಿರುವ ನೂರಾರು ಕುಟುಂಬಗಳು ವಿರೋಧ ವ್ಯಕ್ತಪಡಿಸಿವೆ. ಈಗಾಗಲೆ ಬೈಕಂಪಾಡಿ-ಪಣಂಬೂರು ಪ್ರದೇಶದಲ್ಲಿ 11 ಅಪಾಯಕಾರಿ ಮತ್ತು 8 ಸಂಭಾವ್ಯ ಅಪಾಯಕಾರಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ.ಇದೀಗ ಮತ್ತೆ ಭೂಸ್ವಾಧೀನಪಡಿಸಿ ಪರಿಸರ ಹಾಳುಗೆಡಹಲು ಅವಕಾಶ ನೀಡುವುದಿಲ್ಲ ಎಂದರು.
ಭೂ ಸ್ವಾಧೀನಕ್ಕೂ ಮುನ್ನ ಸ್ಥಳೀಯ ಕೃಷಿಕರ ಅಹವಾಲುಗಳನ್ನು ಆಲಿಸಬೇಕಿತ್ತು. ಆದರೆ, ಜಿಲ್ಲಾಧಿಕಾರಿ ಆ ಜವಾಬ್ದಾರಿ ನಿಭಾಯಿಸದೆ ಎಂಆರ್‌ಪಿಎಲ್ ಕಂಪೆನಿಯ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೋರಾಟಗಾರ್ತಿ ವಿದ್ಯಾ ದಿನಕರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವಾಸುದೇವ ಬೋಳೂರು, ಮಧುಕರ ಅಮೀನ್, ಲಾರೆನ್ಸ್ ಡಿಕುನ್ಹಾ, ವಿಲಿಯಂ ಡಿಸೋಜ, ಹೇಮಲತಾ ಭಟ್, ರಾಜೇಂದ್ರ ಕುಮಾರ್, ಶಬ್ಬೀರ್ ಉಪಸ್ಥಿತರಿದ್ದರು.