×
Ad

ಪುತ್ತೂರು: ಆರೋಗ್ಯ, ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಜಾಗೃತ ಕೋಶದಿಂದ ತನಿಖೆ

Update: 2018-11-02 19:41 IST

ಪುತ್ತೂರು, ನ. 2: ಪುತ್ತೂರು ಸರಕಾರಿ ಆಸ್ಪತ್ರೆಯ ಪ್ರಭಾರ ಆಡಳಿತ ವೈದ್ಯಾಧಿಕಾರಿಯ ಮೇಲೆ ನೀಡಲಾಗಿರುವ ದೂರಿನ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಜಾಗೃತ ಕೋಶದ ವತಿಯಿಂದ ತನಿಖೆ ಕೈಗೊಳ್ಳಲಾಗಿದ್ದು, ಶುಕ್ರವಾರ ಜಾಗೃತಾಧಿಕಾರಿ ಕಚೇರಿಯ ಪ್ರತಿನಿಧಿ ಅಧಿಕಾರಿಗಳ ತಂಡ ಪುತ್ತೂರಿಗೆ ಆಗಮಿಸಿ ಆಡಳಿತ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಸುಮಾರು ಎರಡು ಗಂಟೆಗೂ  ಅಧಿಕ ಹೊತ್ತು ವಿಚಾರಣೆ ನಡೆಸಿದರು.

ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಯೋಗಾನಂದ ಅವರು ಡಾ. ವೀಣಾ ಪಿ.ಎಸ್. ವಿರುದ್ಧ ಈ ಬಗ್ಗೆ ದೂರು ನೀಡಿದ್ದರು. ಇದಲ್ಲದೆ ಪುತ್ತೂರು ಶಾಸಕ ಸಂಜೀವ ಮಠಂದೂರು ಸರಕಾರಿ ಆಸ್ಪತ್ರೆಯ ಸ್ಥಿತಿಯ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದರು. ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದ್ದರು. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರ ವೈದ್ಯರು ಶಾಸಕರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸಲು ಆರಂಭಿಸಿರುವುದಾಗಿ ತಿಳಿದು ಬಂದಿದೆ. 

ವಿಚಾರಣೆಗೆ ಬಂದಿದ್ದ ಅಧಿಕಾರಿಗಳ ತಂಡ ಮಾಧ್ಯಮದವರಿಗೆ ಮಾಹಿತಿ ನೀಡಲು ನಿರಾಕರಿಸಿದರು. ನಾವು ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಇದು ಇಲಾಖೆಯ ಆಂತರಿಕ ವಿಚಾರಣೆ. ನಮ್ಮ ಕೆಲಸವನ್ನಷ್ಟೇ ಮಾಡಲಿದ್ದೇವೆ. ಇದಕ್ಕಿಂತ ಹೆಚ್ಚಿನ ಯಾವುದೇ ಮಾಹಿತಿ ಬೇಕಿದ್ದರೂ ಆಯುಕ್ತರು ಮಾತ್ರ ನೀಡಲು ಸಾಧ್ಯ ಎಂದು ತಿಳಿಸಿದರು.

ತಮ್ಮನ್ನು ಭೇಟಿ ಮಾಡಿದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಮನವಿ ನೀಡಲು ಬಂದಾಗಲೂ ಅದನ್ನು ಅಧಿಕೃತವಾಗಿ ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದರು. ಇದು ಮನವಿ ಸ್ವೀಕರಿಸುವ ವೇದಿಕೆಯಲ್ಲ. ನಮ್ಮ ಕರ್ತವ್ಯದ ಮೇಲೆ ಬಂದಿದ್ದೇವೆ. ನಿಮ್ಮ ಮನವಿ ಏನಿದ್ದರೂ ಆಯುಕ್ತರಿಗೆ ಸಲ್ಲಿಸಿ ಎಂದರು.

ಈ ಸಂದರ್ಭ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ವೀಣಾ ಪಿ.ಎಸ್., ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ತಾಲೂಕು ಆರೋಗ್ಯ ಅಧಿಕಾರಿ ಡಾ.ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News