×
Ad

ಮನಪಾ ವಿರುದ್ಧ ಅಸಮಾಧಾನ ಹೊರಗೆಡಹಿದ ಕೇಂದ್ರ ಸಾಯಿ ಕರ್ಮಚಾರಿ ಆಯೋಗ

Update: 2018-11-02 20:00 IST

ಮಂಗಳೂರು, ನ.2: ಎಲ್ಲಾ ಕಡೆಗಳಲ್ಲಿ ಪೌರ ಕಾರ್ಮಿಕರಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆ ಜಾರಿಗೊಳಿಸಿದ್ದರೂ ಕೂಡಾ ಮಂಗಳೂರು ಮಹಾನಗರಪಾಲಿಕೆ ಯಲ್ಲಿ ಕಳೆದೊಂದು ವರ್ಷದಿಂದ ಉಪಹಾರ ಮತ್ತು 20ರೂ. ದಿನಭತ್ತೆ ನೀಡದೆ ಅನ್ಯಾಯ ಎಸಗಿದೆ ಎಂದು ಹೇಳುವ ಮೂಲಕ ಕೇಂದ್ರ ಸಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಠ್ ಮನಪಾ ವಿರುದ್ಧ ಅಸಮಾಧಾನ ಹೊರಗೆಡಹಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ದ.ಕ.ಜಿಲ್ಲೆಯು ಬುದ್ದಿವಂತರ ಮತ್ತು ಸುಶಿಕ್ಷಿತರ ಜಿಲ್ಲೆ ಎಂದು ಹೆಸರು ವಾಸಿಯಾದರೂ ಕೂಡಾ ಸಾಯಿ ಕರ್ಮಚಾರಿಗಳಿಗೆ ಸೌಲಭ್ಯಗಳನ್ನು ನೀಡುವಲ್ಲಿ ಅತೀ ಹಿಂದುಳಿದ ಜಿಲ್ಲೆಯಾಗಿ ಪರಿಗಣಿಸಲ್ಪಟ್ಟಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಯನ್ನು ಅಧಿಕಾರಿಗಳು ಪೌರಕಾರ್ಮಿಕರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂದರು.

ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಮನಪಾದಲ್ಲಿ ಕಳೆದೊಂದು ವರ್ಷದಿಂದ ಬೆಳಗ್ಗಿನ ಉಪಹಾರ ಜಾರಿಗೊಳಿಸಿಲ್ಲ. ದಿನಕ್ಕೆ 20 ರೂ.ನಂತೆ ಭತ್ತೆಯನ್ನೂ ನೀಡಿಲ್ಲ. ಪಾಲಿಕೆಯು 7 ವರ್ಷಗಳ ಹೊರಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಸರಕಾರಕ್ಕಿಂತ ತಾವು ಮಾಡಿಕೊಂಡ ಒಪ್ಪಂದವೇ ದೊಡ್ಡದು ಎನ್ನುವ ರೀತಿಯಲ್ಲಿ ಪಾಲಿಕೆ ವರ್ತಿಸುತ್ತಿವೆ. ಬಿಬಿಎಂಪಿಯಲ್ಲಿ 32 ವಿಭಾಗಗಳಲ್ಲಿ 32 ಸಾವಿರ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ನೇಮಿಸ ಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದಾಗ ಕೇವಲ 17 ಸಾವಿರ ಮಾತ್ರ ಪೌರಕಾರ್ಮಿಕರಿದ್ದರು. ಉಳಿದದೆಲ್ಲ ಬೋಗಸ್ ಆಗಿತ್ತು. 650 ಕೋ.ರೂ. ಅವ್ಯವಹಾರ ನಡೆದಿತ್ತು. ಅದನ್ನು ಮರುಪಾವತಿಸುವ ನಿಟ್ಟಿನಲ್ಲಿ ಸಿಬಿಐ ತನಿಖೆ ನಡೆಸುವಂತೆ ತಾನು ಶಿಾರಸು ಮಾಡಿದ್ದೆ. ಆದರೆ ಎಸಿಬಿ ತನಿಖೆಗೆ ನೀಡಲಾಗಿದೆ. ಹಾಗೆ ಮಂಗಳೂರು ಮನಪಾದಲ್ಲಿ 15 ವಿಭಾಗಗಳಿವೆ. ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪನಿಯಡಿ 519 ಮಂದಿ ಹೊರಗುತ್ತಿಗೆ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಕುರಿತು ಕೂಡ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಗದೀಶ್ ಹಿರೇಮಠ್ ಹೇಳಿದರು.

ಪೌರ ಕಾರ್ಮಿಕರಿಗೆ ಪಾಲಿಕೆ ವತಿಯಿಂದ ನಿರ್ಮಿಸಿ ಕೊಟ್ಟಿರುವ ವಸತಿ ಯೋಜನೆ ತೀರಾ ಅವೈಜ್ಞಾನಿಕವಾಗಿದೆ. ಪೌರ ಕಾರ್ಮಿಕರಿಗೆ 700ರಿಂದ 1200 ಚ.ಅ. ವಿಸ್ತೀರ್ಣದ ಮನೆ ಕಟ್ಟಿಕೊಡಬೇಕೆಂಬ ಮಾರ್ಗಸೂಚಿಯಿದೆ. ಆದರೆ ಮನಪಾ ಇದನ್ನು ಗಾಳಿಗೆ ತೂರಿ 300 ಚ.ಅ. ವಿಸ್ತೀರ್ಣದ ಮನೆ ಕಟ್ಟಿಕೊಟ್ಟದೆ. ಎರಡು ಮನೆಗಳನ್ನು ಸೇರಿಸಿ ಒಂದು ಮನೆ ಮಾಡಿಕೊಡುವಂತೆ ಹಾಗೂ ಮುಂದೆ ನಿರ್ಮಿಸುವ ಮನೆಗಳನ್ನು ಕನಿಷ್ಠ 700 ಚ.ಅ. ವಿಸ್ತೀರ್ಣದಲ್ಲಿ ನಿರ್ಮಿಸುವಂತೆ ಪಾಲಿಕೆಗೆ ಸೂಚಿಸಿದ್ದೇನೆ ಎಂದು ಜಗದೀಶ್ ಹಿರೇಮಠ್ ಹೇಳಿದರು.

ಪೌರ ಕಾರ್ಮಿಕ ಸೇವೆಯನ್ನು ಅತ್ಯಾಧುನಿಕಗೊಳಿಸುವ ನಿಟ್ಟಿನಲ್ಲಿ ರೊಬೋ ತಯಾರು ಮಾಡಲಾಗಿದೆ. ದೇಶದ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಮ್ಯಾನ್‌ಹೋಲ್‌ಗೆ ಇಳಿದು ಮಾನವ ಸಾವು ಸಂಭವಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೊಬೋ ಬಳಕೆ ಮಾಡಲಾಗುವುದು. ಸಕ್ಕಿಂಗ್ ಮತ್ತು ಜೆಟ್ಟಿಂಗ್ ಮೆಷಿನ್ ಬಳಕೆಗೆ ಕೂಡ ಆದ್ಯತೆ ನೀಡಲು ಸೂಚಿಸಲಾಗಿದೆ ಎಂದು ಜಗದೀಶ್ ಹಿರೇಮಠ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಹನುಮಂತರಾಯ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News