×
Ad

ಸುರತ್ಕಲ್ ಟೋಲ್ ರದ್ದತಿ: ಕೇಂದ್ರಕ್ಕೆ ಶಿಫಾರಸು ಮಾಡಲು ಎನ್‌ಎಚ್‌ಎಐ ಒಪ್ಪಿಗೆ

Update: 2018-11-02 20:04 IST

ಮಂಗಳೂರು, ನ.2: ಸುರತ್ಕಲ್ ಟೋಲ್ ಕೇಂದ್ರವನ್ನು ರದ್ದುಪಡಿಸುವಂತೆ ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಶಿಫಾರಸು ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಮಂಗಳೂರು ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ ಕುಮಾರ್ ಒಪ್ಪಿಗೆ ನೀಡಿದ್ದಾರೆ.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಟೋಲ್‌ಗೇಟ್ ವಿರೋಧಿ ಹೋರಾಟಗಾರರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ತಕ್ಷಣ ರದ್ದುಪಡಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ ಕುಮಾರ್ ಇಂದೇ ಪತ್ರ ಬರೆಯುವುದಾಗಿ ಸ್ಪಷ್ಪಪಡಿಸಿದರು.

ಸುರತ್ಕಲ್ ಸಮೀಪದ ಮುಕ್ಕ ಟೋಲ್ ಕೇಂದ್ರವನ್ನು ರದ್ದುಪಡಿಸುವಂತೆ ವರ್ಷದ ಹಿಂದೆಯೇ ರಾಜ್ಯ ಸರಕಾರಕ್ಕೆ ಪ್ರಸ್ತಾಪ ಮಾಡಲಾಗಿದೆ. ಪ್ರತಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯ ಸರಕಾರ ಕೂಡ ಟೋಲ್ ರದ್ದುಪಡಿಸಲು ಒಪ್ಪಿಗೆ ನೀಡಿದೆ. ಇದೇ ಪರಿಸ್ಥಿತಿಯನ್ನು ಇನ್ನಷ್ಟು ಸಮಯ ಮುಂದುವರಿಯಲು ಅವಕಾಶ ನೀಡಬಾರದು. ತಕ್ಷಣ ಟೋಲ್ ಸಮಸ್ಯೆ ನಿಭಾಯಿಸಬೇಕು ಎಂದು ಸಚಿವ ಖಾದರ್ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಸುರತ್ಕಲ್‌ನಲ್ಲಿ 2015ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಸಂಗ್ರಹ ಕೇಂದ್ರವನ್ನು ತೆರೆಯಲಾಯಿತು. ವರ್ಷದ ಹಿಂದೆಯೇ ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದ ಜತೆ ವಿಲೀನಗೊಳಿಸುವ ಪ್ರಸ್ತಾಪವನ್ನು ಎನ್‌ಎಚ್‌ಎಐ ಮಂಡಿಸಿತ್ತು. ಇದೀಗ ಪ್ರತಿ 6 ತಿಂಗಳಿಗೊಮ್ಮೆ ಟೋಲ್ ಸಂಗ್ರಹದ ಗುತ್ತಿಗೆಯನ್ನು ನವೀಕರಿಸಲಾಗುತ್ತಿದೆ. ತಾನು ಹೇಳಿದ ಮಾತಿಗೆ ಎನ್‌ಎಚ್‌ಎಐ ಬದ್ದವಾಗಿಲ್ಲ. ಹಳೆ ಗುತ್ತಿಗೆದಾರರೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಟೋಲ್‌ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.

ಹೆಜಮಾಡಿ ಟೋಲ್ ಕೇಂದ್ರದ ಜತೆ ಸುರತ್ಕಲ್ ಟೋಲ್ ಕೇಂದ್ರ ವಿಲೀನಗೊಳಿಸುವ ಪ್ರಸ್ತಾಪ ಬೇಡ. ನಮ್ಮದೇನಿದ್ದರೂ ಸುರತ್ಕಲ್ ಟೋಲ್ ರದ್ದುಪಡಿಸಬೇಕೆಂಬ ಸಿಂಗಲ್ ಅಜೆಂಡಾ (ಕಾರ್ಯಸೂಚಿ)ಬೇಡಿಕೆಯಾಗಿರಲಿ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಈ ಸಂದರ್ಭ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಮಿಥುನ್ ರೈ, ಕಾರ್ಪೊರೇಟರ್ ಪುರುಷೋತ್ತಮ ಚಿತ್ರಾಪುರ, ದಯಾನಂದ ಶೆಟ್ಟಿ, ರೇವತಿ, ಬಿ.ಕೆ. ಇಮ್ತಿಯಾಝ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News