ಡಾ.ರಾಮದಾಸ ಎಂ.ಪೈಗೆ ಎಫ್‌ಐಸಿಸಿಐ ಜೀವನಸಾಧನೆ ಪ್ರಶಸ್ತಿ-2018 ಪ್ರದಾನ

Update: 2018-11-02 14:55 GMT

ಮಣಿಪಾಲ, ನ.2: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಚಾನ್ಸಲರ್ ಮತ್ತು ಅಧ್ಯಕ್ಷ, ಮಣಿಪಾಲ ಎಜ್ಯುಕೇಶನ್ ಎಂಡ್ ಮೆಡಿಕಲ್ ಗ್ರೂಪ್‌ನ ಗೌರವ ಅಧ್ಯಕ್ಷ ಡಾ.ರಾಮದಾಸ ಎಂ.ಪೈ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಹೊಸದಿಲ್ಲಿಯ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್‌ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಎಫ್‌ಐಸಿಸಿಐ) 2018ನೇ ಸಾಲಿನ ‘ಜೀವನ ಸಾಧನೆ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ.

ಕಳೆದ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಪೈ ಪರವಾಗಿ ಮಾಹೆಯ ಕುಲಪತಿ ಡಾ.ವಿನೋದ್ ಭಟ್ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಇತರ ಬದ್ದತೆಯ ಕಾರಣಗಳಿಗಾಗಿ ಡಾ.ಪೈ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂದು ಮಾಹೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಪರಿಶ್ರಮ ಹಾಗೂ ಅರ್ಪಣಾ ಮನೋಭಾವದಿಂದ ಈ ಕ್ಷೇತ್ರಗಳಲ್ಲಿ ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆಯನ್ನು ನೀಡಿದ್ದಾರೆ. ತನ್ನ ಇಡೀ ಜೀವನವನ್ನು ಇದಕ್ಕಾಗಿ ಮೀಸಲಿಟ್ಟಿದ್ದಾರೆ.’ ಎಂದು ಪ್ರಶಸ್ತಿಯೊಂದಿಗೆ ನೀಡಲಾದ ಪ್ರಶಂಸಾ ಪತ್ರದಲ್ಲಿ ತಿಳಿಸಲಾಗಿದೆ.

ಪದ್ಮಭೂಷಣ ಪ್ರಶಸ್ತಿ ವಿಜೇತ ಡಾ.ರಾಮದಾಸ ಪೈ ಅವರಿಗೆ ದೊರಕಿರುವ ಈ ಪ್ರತಿಷ್ಠಿತ ಪ್ರಶಸ್ತಿಯ ಕುರಿತಂತೆ ಅತೀವ ಹರ್ಷ ವ್ಯಕ್ತಪಡಿಸಿರುವ ಎಂಇಎಂಜಿ ಅಧ್ಯಕ್ಷ ಡಾ.ರಂಜನ್ ಪೈ, ನಮಗೆಲ್ಲರಿಗೂ ಇದು ಹೆಮ್ಮೆಯ ಕ್ಷಣವಾಗಿದೆ. ಇದಕ್ಕಾಗಿ ಅವರನ್ನು ಇಡೀ ಮಣಿಪಾಲ ಸಂಸ್ಥೆಯ ವತಿಯಿಂದ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News