ಜಮ್ಮು-ಕಾಶ್ಮೀರ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಖಾಸಗಿ ಭದ್ರತಾ ಸಿಬ್ಬಂದಿಗಯ ವಿಚಾರಣೆ
ಶ್ರೀನಗರ, ನ.2: ಜಮ್ಮು ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಉಗ್ರರು ಗುರುವಾರ ರಾತ್ರಿ ಬಿಜೆಪಿ ಮುಖಂಡ ಅನಿಲ್ ಪರಿಹರ್ ಮತ್ತವರ ಸಹೋದರ ಅಜಿತ್ ಪರಿಹರ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯ ಹಿನ್ನೆಲೆಯಲ್ಲಿ, ಇವರ ಭದ್ರತೆಗೆಂದು ನಿಯೋಜಿಸಲ್ಪಟ್ಟಿದ್ದ ಇಬ್ಬರು ಭದ್ರತಾ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ.
ಉಗ್ರರ ಹಿಟ್‌ಲಿಸ್ಟ್‌ನಲ್ಲಿದ್ದ ಬಿಜೆಪಿ ಸ್ಥಳೀಯ ಘಟಕದ ಕಾರ್ಯದರ್ಶಿ ಅನಿಲ್ ಪರಿಹರ್‌ಗೆ ಭದ್ರತೆ ಒದಗಿಸಲಾಗಿತ್ತು. ಆದರೆ ಘಟನೆ ನಡೆದ ಸಂದರ್ಭ ಇಬ್ಬರು ಭದ್ರತಾ ಸಿಬ್ಬಂದಿ ಅವರ ಜೊತೆಗಿರಲಿಲ್ಲ ಎಂದು ಕಿಶ್ತ್‌ವಾರ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ . ಈ ಮಧ್ಯೆ, ಅನಿಲ್ ಪರಿಹರ್ ಹತ್ಯೆಗೆ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಪೊಲೀಸರತ್ತ ಕಲ್ಲೆಸೆದಿದ್ದು, ಕಿಶ್ತ್‌ವಾರ್ ಪೊಲೀಸ್ ಅಧಿಕಾರಿ ರಾಜೇಂದರ್ ಗುಪ್ತ ಸಹಿತ ಹಲವು ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ.
ಪರಿಸ್ಥಿತಿ ನಿಯಂತ್ರಿಸಲು ಜಿಲ್ಲಾಡಳಿತ ಕಿಶ್ತ್‌ವಾರ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಕರ್ಫ್ಯೂ ವಿಧಿಸಿದೆ. ಸೆಕ್ಷನ್ 144 ಜಾರಿಗೊಳಿಸಲಾಗಿದ್ದು ಈ ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಮೃತ ಸಹೋದರರಿಬ್ಬರೂ ಪರಿಸರದಲ್ಲಿ ಜನಪ್ರಿಯರಾಗಿದ್ದು ಮುಸ್ಲಿಮರೊಂದಿಗೂ ಅನ್ಯೋನ್ಯವಾಗಿದ್ದರು. ಈ ಕಾರಣ ಇವರ ಹತ್ಯೆಯಿಂದ ಇಲ್ಲಿ ಕೋಮುಗಲಭೆ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.