ಪತನಗೊಂಡ ವಿಮಾನದಿಂದ ಗಂಟೆಗಳ ಮೊದಲು ಅಪಾಯದ ಸಂದೇಶ ಕಳುಹಿಸಿದ್ದ ಪೈಲೆಟ್

Update: 2018-11-02 15:47 GMT

ಜಕಾರ್ತ, ನ. 2: ಇಂಡೋನೇಶ್ಯದ ಬಾಲಿ ದ್ವೀಪದಿಂದ ರವಿವಾರ ರಾಜಧಾನಿ ಜಕಾರ್ತಗೆ ಹಾರುತ್ತಿದ್ದ ‘ಲಯನ್ ಏರ್’ ವಿಮಾನದ ಪೈಲಟ್, ತಾಂತ್ರಿಕ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅಪಾಯದ ಕರೆಯನ್ನು ಮಾಡಿದ್ದರು. ಬಳಿಕ ಆ ಸಮಸ್ಯೆಗಳನ್ನು ಸರಿಪಡಿಸಲಾಯಿತು ಹಾಗೂ ವಿಮಾನ ತನ್ನ ಪ್ರಯಾಣ ಮುಂದುವರಿಸಿತು.

ಗಂಟೆಗಳ ಬಳಿಕ ಇನ್ನೊಂದು ಹಾರಾಟದಲ್ಲಿದ್ದ ಅದೇ ವಿಮಾನ ಪತನಗೊಂಡಿತು ಹಾಗೂ ವಿಮಾನದಲ್ಲಿದ್ದ ಎ ಲ್ಲ  189 ಮಂದಿ ಮೃತಪಟ್ಟರು.

 ಅಪಾಯದ ಕರೆ ಮಾಡಿದ ಬಳಿಕ ನಿಯಂತ್ರಣ ಗೋಪುರದೊಂದಿಗೆ ಮಾತನಾಡಿದ ಪೈಲಟ್, ವಿಮಾನ ಸಹಜ ರೀತಿಯಲ್ಲಿ ಹಾರಾಟ ನಡೆಸುತ್ತಿದೆ, ಹಾಗಾಗಿ, ಸೂಚಿಸಲಾಗಿರುವಂತೆ ತಾನು ವಿಮಾನ ನಿಲ್ದಾಣಕ್ಕೆ ಹಿಂದಿರುಗುವುದಿಲ್ಲ ಎಂದು ಹೇಳಿದ್ದರು ಎಂದು ಬಾಲಿ-ನುಸ ತೆಂಗರ ಪ್ರದೇಶದ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥ ಹರ್ಸನ್ ‘ರಾಯ್ಟರ್ಸ್’ಗೆ ತಿಳಿಸಿದರು.

‘‘ವಿಮಾನವನ್ನು ಡೆನ್ಪಸರ್‌ನಿಂದ ಜಕಾರ್ತಕ್ಕೆ ಹಾರಿಸುವ ಬಗ್ಗೆ ಸ್ವತಃ ಕ್ಯಾಪ್ಟನ್ ವಿಶ್ವಾಸ ಹೊಂದಿದ್ದರು’’ ಎಂದು ಹರ್ಸನ್ ಹೇಳಿದರು.

ಲಯನ್ ಏರ್ ವಿಮಾನವು ಬಾಲಿಯಿಂದ ಹಾರಾಟ ಆರಂಭಿಸಿದ 5 ನಿಮಿಷಗಳ ಬಳಿಕ, ಅದೇ ವಿಮಾನ ನಿಲ್ದಾಣಕ್ಕೆ ಹಿಂದಿರುಗುವುದಾಗಿ ಮನವಿ ಮಾಡಿತು. ಆದರೆ, ಬಳಿಕ, ಸಮಸ್ಯೆ ಪರಿಹಾರವಾಗಿದೆ ಹಾಗೂ ತಾನು ಜಕಾರ್ತಕ್ಕೆ ಹೋಗುತ್ತಿದ್ದೇನೆ ಎಂಬುದಾಗಿ ವಿಮಾನದ ಪೈಲಟ್ ತಿಳಿಸಿದರು.

ಡೆನ್ಪಸರ್‌ನಿಂದ ಜಕಾರ್ತಕ್ಕೆ ಹೋಗುತ್ತಿದ್ದ ವಿಮಾನ ರವಿವಾರ ರಾತ್ರಿ 10:55ಕ್ಕೆ ಜಕಾರ್ತ ತಲುಪಿತು.

ಅದೇ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಸೋಮವಾರ ಬೆಳಗ್ಗೆ 6:20ಕ್ಕೆ ಬಂಗ್‌ಕ ದ್ವೀಪಕ್ಕೆ ಹಾರಾಟ ಆರಂಭಿಸಿತು. ಆದರೆ, ಹಾರಾಟ ಆರಂಭಿಸಿದ 13 ನಿಮಿಷಗಳ ಬಳಿಕ, ಸಮುದ್ರಕ್ಕೆ ಅಪ್ಪಳಿಸಿತು.

ಪತನಗೊಳ್ಳುವ ಸ್ವಲ್ಪವೇ ಮೊದಲು, ವಿಮಾನವನ್ನು ಹಿಂದಕ್ಕೆ ತರುವುದಾಗಿ ಪೈಲಟ್ ಮನವಿ ಮಾಡಿದ್ದರು.

ವಿಮಾನ ನಿಲ್ದಾಣಕ್ಕೆ ಸುತ್ತು ಹಾಕುವಂತೆ ತಿಳಿಸಲಾಗಿತ್ತು: ಇನ್ನೊಂದು ವಿಮಾನದ ಪೈಲಟ್

ಲಯನ್ ಏರ್ ವಿಮಾನ ಬಾಲಿಯಿಂದ ಹೊರಟ ಸ್ವಲ್ಪವೇ ಹೊತ್ತಿನ ಬಳಿಕ, ಬಾಲಿ ಸಮೀಪಿಸುತ್ತಿದ್ದ ಇನ್ನೊಂದು ವಿಮಾನದ ಪೈಲಟ್, ವಿಮಾನ ನಿಲ್ದಾಣದ ಮೇಲೆ ಸುತ್ತು ಹಾಕುವಂತೆ ತನಗೆ ಆದೇಶಿಸಲಾಗಿತ್ತು ಎಂದು ಹೇಳಿದ್ದಾರೆ. ಲಯನ್ ಏರ್ ಪೈಲಟ್ ಮತ್ತು ವಾಯು ಸಾರಿಗೆ ನಿಯಂತ್ರಕರ ನಡುವೆ ನಡೆದ ಸಂಭಾಷಣೆಯನ್ನು ತನಗೆ ಕೇಳಿಸಲಾಯಿತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News