ಲೈಂಗಿಕ ಕಿರುಕುಳ: ಗೂಗಲ್ ಉದ್ಯೋಗಿಗಳಿಂದ ಜಾಗತಿಕ ಪ್ರತಿಭಟನೆ
ಸಾನ್‌ಫ್ರಾನ್ಸಿಸ್ಕೊ, ನ. 2: ಲೈಂಗಿಕ ದುರ್ವರ್ತನೆ ಆರೋಪಕ್ಕೊಳಗಾಗಿರುವ ತನ್ನ ಅಧಿಕಾರಿಗಳ ಬಗ್ಗೆ ಇಂಟರ್‌ನೆಟ್ ದೈತ್ಯ ‘ಗೂಗಲ್; ಮೃದು ಧೋರಣೆ ಹೊಂದಿದೆ ಎಂದು ಆರೋಪಿಸಿ ಕಂಪೆನಿಯ ನೂರಾರು ಇಂಜಿನಿಯರ್‌ಗಳು ಮತ್ತು ಇತರ ಉದ್ಯೋಗಿಗಳು ಗುರುವಾರ ಜಗತ್ತಿನಾದ್ಯಂತ ಇರುವ ಗೂಗಲ್ ಕಚೇರಿಗಳಿಂದ ಹೊರನಡೆದರು.
ಟೋಕಿಯೊ ಮತ್ತು ಸಿಂಗಾಪುರಗಳಿಂದ ಹಿಡಿದು ಲಂಡನ್ ಮತ್ತು ಡಬ್ಲಿನ್‌ವರೆಗೆ ಗೂಗಲ್ ಉದ್ಯೋಗಿಗಳು ತಮ್ಮ ಕಚೇರಿಗಳಿಂದ ಹೊರನಡೆದರು.
ಗೂಗಲ್‌ನ ಆ್ಯಂಡ್ರಾಯಿಡ್ ಸಾಫ್ಟ್‌ವೇರ್ ನಿರ್ಮಾಪಕ ಆ್ಯಂಡಿ ರೂಬಿನ್ ವಿರುದ್ಧ ಲೈಂಗಿಕ ದುರ್ವರ್ತನೆ ಆರೋಪ ಹೊರಿಸುವ ವರದಿಯೊಂದು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ವಾರದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಆ್ಯಂಡಿ ರೂಬಿನ್ ವಿರುದ್ಧದ ಲೈಂಗಿಕ ದುರ್ವರ್ತನೆ ಆರೋಪಗಳು ನಿಜವೆಂದು ಗೂಗಲ್ ನಿರ್ಧರಿಸಿದ ಬಳಿಕವೂ, 2014ರಲ್ಲಿ ಅವರಿಗೆ 90 ಮಿಲಿಯ ಡಾಲರ್ (650 ಕೋಟಿ ರೂಪಾಯಿ) ನಿವೃತ್ತಿ ಪರಿಹಾರ ನೀಡಲಾಗಿತ್ತು ಎಂಬುದಾಗಿ ಪತ್ರಿಕೆ ಆರೋಪಿಸಿದೆ.
ಸಿಇಒ ಕ್ಷಮೆ ಯಾಚನೆ
ಮಂಗಳವಾರ ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್ ಒಂದರಲ್ಲಿ, ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಂದರ ಪಿಚೈ, ಕಂಪೆನಿಯ ‘ಹಿಂದಿನ ವರ್ತನೆ’ಗಳಿಗಾಗಿ ಕ್ಷಮೆ ಕೋರಿದ್ದಾರೆ.
‘‘ನಿಮ್ಮಲ್ಲಿ ಹೆಚ್ಚಿನವರು ಹೊಂದಿರುವ ಕೋಪ ಮತ್ತು ನಿರಾಶೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ’’ ಎಂದು ಪಿಚೈ ಬರೆದಿದ್ದಾರೆ.
‘‘ಅದೇ ಭಾವನೆ ನನ್ನಲ್ಲಿಯೂ ಇದೆ. ಸಮಾಜದಲ್ಲಿ ತುಂಬಾ ಸಮಯದಿಂದ ಉಳಿದುಕೊಂಡು ಬಂದಿರುವ ವಿಷಯದಲ್ಲಿ ಪ್ರಗತಿ ತರುವಲ್ಲಿ ನಾನು ಸಂಪೂರ್ಣ ಬದ್ಧನಾಗಿದ್ದೇನೆ. ಹೌದು, ಇಲ್ಲಿ ಗೂಗಲ್‌ನಲ್ಲಿಯೂ ಅದೇ ಮನೋಭಾವನೆ ಇದೆ’’ ಎಂದಿದ್ದಾರೆ.
ಈಗಲೂ ನಾನೇ ಬಾಸ್: ಸುಂದರ ಪಿಚೈ
ಈ ದಿನಗಳಲ್ಲಿ, ಗೂಗಲ್ ಉದ್ಯೋಗಿಗಳು ಕಂಪೆನಿಯ ಮೇಲೆ ಅಸಾಧಾರಣ ಮಟ್ಟದಲ್ಲಿ ನಿಯಂತ್ರಣವನ್ನು ಹೇರುತ್ತಿದ್ದಾರೆ.ಆದರೆ, ನಾನು ಈಗಲೂ ಕಂಪೆನಿಯ ವ್ಯವಹಾರಗಳ ಉಸ್ತುವಾರಿ ಹೊಂದಿದ್ದೇನೆ ಹಾಗೂ ಸಿಬ್ಬಂದಿ ಬಂಡಾಯಕ್ಕೆ ನಿರಂತರವಾಗಿ ಸೊಪ್ಪು ಹಾಕುವುದಿಲ್ಲ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ಪಿಚೈ ಹೇಳಿದ್ದಾರೆ.
‘‘ನಾವು ಜನಮತಗಣನೆಯ ಆಧಾರದಲ್ಲಿ ಕಂಪೆನಿಯನ್ನು ನಡೆಸುವುದಿಲ್ಲ’’ ಎಂದು ನ್ಯೂಯಾರ್ಕ್‌ನಲ್ಲಿ ಗುರುವಾರ ನಡೆದ ಸಮ್ಮೇಳನವೊಂದರಲ್ಲಿ ಪಿಚೈ ನುಡಿದರು.