ರೈಲಿನಲ್ಲಿ ಅಕ್ರಮ ಹಣ ಸಾಗಾಟ: ಮೂವರ ಬಂಧನ; 1.65 ಕೋಟಿ ರೂ.ವಶ
ಉಡುಪಿ, ನ.2: ಮುಂಬೈ- ಮಂಗಳೂರು ಮೂಲಕ ಕೇರಳದ ಎರ್ನಾಕುಲಂಗೆ ಸಂಚರಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ (ನಂ.16345) ರೈಲಿನಲ್ಲಿ 1.65 ಕೋಟಿ ರೂ. ಹಣವನ್ನು ಅಕ್ರಮವಾಗಿ ಸಾಗಿಸುತಿರುವುದನ್ನು ಪತ್ತೆ ಹಚ್ಚಿದ ರೈಲ್ವೆ ಪೊಲೀಸ್ ಪಡೆಯ ಉಡುಪಿಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಈ ಸಂಬಂಧ ಮೂವರನ್ನು ಬಂಧಿಸಿ ನಗದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ರಾಜಸ್ತಾನ ಮೂಲದ ಪ್ರಕಾಶ್ (24), ಮಹಾರಾಷ್ಟ್ರದ ಗಣೇಶ್ (28) ಹಾಗೂ ಮೂಲತ: ರಾಜಸ್ತಾನದವರಾಗಿದ್ದು, ಕಳೆದ 10-15 ವರ್ಷಗಳಿಂದ ಕೇರಳದ ಕಣ್ಣೂರಿನಲ್ಲಿ ಗೃಹೋಪಯೋಗಿ ವಸ್ತುಗಳ ಉದ್ಯಮಿಯಾಗಿರುವ ಯಶವಂತ್ ಸಿಂಗ್ (38) ಎಂದು ಗುರುತಿಸಲಾಗಿದೆ.
ಆರೋಪಿಗಳ ಕೈಯಲ್ಲಿದ್ದ 2 ಬ್ಯಾಗ್‌ನಲ್ಲಿಟ್ಟಿದ್ದ 1.65 ಕೋಟಿ ರೂ.ವನ್ನು ರೈಲ್ವೆ ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಹಣದ ಮೂಲದ ಬಗ್ಗೆ ತೀವ್ರವಾದ ವಿಚಾರಣೆ ನಡೆಯುತ್ತಿದೆ.
ಪ್ರಕಾಶ್ ಹಾಗೂ ಗಣೇಶ್ ಅವರು ಯಶವಂತ್ ಸಿಂಗ್‌ಗೆ ಸೇರಿದ 1.65 ಕೋಟಿರೂ.ಗಳನ್ನು ಕುಮಟದಿಂದ ಕಣ್ಣೂರಿಗೆ ಸಾಗಿಸುತಿದ್ದರೆಂದು ತಿಳಿದು ಬಂದಿದೆ. ಇವರಿಬ್ಬರನ್ನು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಹಣದೊಂದಿಗೆ ವಶಕ್ಕೆ ಪಡೆದ ರೈಲ್ವೆ ಪೊಲೀಸರು, ಬಳಿಕ ಉಪಾಯದಿಂದ ಕಣ್ಣೂರಿನಲ್ಲಿದ್ದ ಯಶವಂತ್ ಸಿಂಗ್‌ರನ್ನು ಉಡುಪಿಗೆ ಕರೆಸಿಕೊಂಡು ಬಳಿಕ ಬಂಧಿಸಿದರೆಂದು ತಿಳಿದುಬಂದಿದೆ.
ಯಶವಂತ್ ಸಿಂಗ್‌ರ ನೌಕರರಾದ ಪ್ರಕಾಶ್ ಮತ್ತು ಗಣೇಶ್ ಶುಕ್ರವಾರ ಬೆಳಗಿನ ಜಾವ 3 ಕ್ಕೆ ಕುಮಟದಲ್ಲಿ ಹೆಗಲಿನಲ್ಲಿ ಹಾಕುವ ಕಪ್ಪು ಬಣ್ಣದ ಬ್ಯಾಗ್ ನೊಂದಿಗೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲನ್ನೇರಿದ್ದು, ಎಸಿ ಬೋಗಿಯಲ್ಲಿ ಪ್ರಯಾಣಿಸುತಿದ್ದರು. ಕೊಂಕಣ ರೈಲು ಮಾರ್ಗದಲ್ಲಿ ಪದೇ ಪದೇ ನಡೆಯುತ್ತಿರುವ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್ ಪಡೆ ವಿಶೇಷ ತಪಾಸಣೆಗೆ ಸಿಬ್ಬಂದಿಗಳನ್ನು ನೇಮಿಸಿದ್ದು, ಉಡುಪಿ ರೈಲ್ವೆ ರಕ್ಷಣಾ ದಳದ ಸಂತೋಷ್ ಗಾಂವ್ಕರ್ ನೇತೃತ್ವದ ತಂಡ ರೈಲಿನಲ್ಲಿ ತಪಾಸಣೆ ನಡೆಸುತಿತ್ತು. ಪ್ರಕಾಶ್ ಹಾಗೂ ಗಣೇಶ್‌ನ ನಡವಳಿಕೆಯಿಂದ ಅನುಮಾನಗೊಂಡು ಹೆಚ್ಚಿನ ವಿಚಾರಣೆ ಮಾಡಿದ್ದರು. ಉಡುಪಿ ಸಮೀಪಿಸುತಿದ್ದಂತೆ ಅವರ ಕೈಯಲ್ಲಿದ್ದ 2 ಕಪ್ಪು ಬ್ಯಾಗ್‌ಗಳ ತಪಾಸಣೆ ನಡೆಸಿದ್ದು, ಗಾಂಜಾ ಸಾಗಾಟದ ಗುಮಾನಿಯಲ್ಲಿ ಶೋಧಕ್ಕೆ ಮುಂದಾಗಿದ್ದರು.
ಎರಡು ಬ್ಯಾಗ್‌ಗಳ ತಪಾಸಣೆ ವೇಳೆ 500 ಹಾಗೂ 2000ರೂ. ಮುಖ ಬೆಲೆಯ ನೋಟುಗಳ ಕಂತೆ ಕಂತೆಯೇ ಪತ್ತೆಯಾಯಿತು. ಬೆಳಗ್ಗಿನ ಜಾವ 4:10ಕ್ಕೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಈ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಈ ಬಗ್ಗೆ ಮಣಿಪಾಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದಲ್ಲದೇ, ಉಡುಪಿ ಆದಾಯ ತೆರಿಗೆ ಉಪ ವಿಭಾಗದ ವಾರ್ಡ್ 3ರ ಹಿರಿಯ ಅಧಿಕಾರಿಗಳಾದ ರಘುಕಾಂತಪ್ಪ ಹೆಬ್ಬಾರ್, ಐಟಿಪಿ ಪರ್ವಿಂಧರ್ ಕುಮಾರ್ ಆಗಮಿಸಿ ಆರೋಪಿ ಗಳ ವಿಚಾರಣೆ ನಡೆಸಿದರು.
ಬಳಿಕ ಮಂಗಳೂರಿನಿಂದ ಆದಾಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕ ಸೌರಭ್ ದುಬೆ ನೇತೃತ್ವದಲ್ಲಿ ತಂಡ ಆಗಮಿಸಿ ಹಣದ ಮೂಲದ ಬಗ್ಗೆ ತೀವ್ರವಾದ ವಿಚಾರಣೆಗೊಳಪಡಿಸಲಾಗಿದೆ. ರೈಲ್ವೇ ರಕ್ಷಣಾ ದಳದ ಕೊಠಡಿ ಯಲ್ಲಿ ಪ್ರತ್ಯೇಕವಾಗಿಟ್ಟು ವಿಚಾರಣೆಯನ್ನು ನಡೆಸಲಾಗುತಿದ್ದು, ಇವುಗಳ ವೀಡಿಯೊ ಚಿತ್ರೀಕರಣವನ್ನೂ ಮಾಡಲಾಗಿದೆ.
ಸಂಜೆವರೆಗೂ ವಿಚಾರಣೆ ನಡೆದಿದ್ದು, ಅಕ್ರಮವಾಗಿ ಹಣ ಹೊಂದಿದ ಬಗ್ಗೆ ಯಾವುದೇ ಸೂಕ್ತ ದಾಖಲೆಗಳನ್ನು ಕೊಡದ ಹಿನ್ನೆಲೆಯಲ್ಲಿ ಮೂವರನ್ನು ಐಟಿ ಅಧಿಕಾರಿಗಳು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಟಿ.ಆರ್. ಜೈಶಂಕರ್, ಮಣಿಪಾಲ ಠಾಣೆಯ ಎಸ್. ಸುದರ್ಶನ್, ಉಡುಪಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಫ್ಲೈಯಿಂಗ್ ಸ್ಕ್ವಾಡ್‌ನ ಮೋಹನ್‌ರಾಜ್ ಹಲವು ಸಹಿತ ಅಧಿಕಾರಿಗಳು ಸ್ಥಳದಲ್ಲಿದ್ದರು.
ಬಲೆಗೆ ಬಿದ್ದ ಜಾಣ: ರೈಲಿನಲ್ಲಿ ಹಣ ಸಾಗಾಟ ಮಾಡಿ ರೈಲ್ವೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳಿಗೆ ಪದೇ ಪದೇ ಕರೆ ಮಾಡುತಿದ್ದ ಯಶವಂತ್‌ನನ್ನು ಪೊಲೀಸರು ಜಾಣತನದಿಂದ ಕಣ್ಣೂರಿನಿಂದ ಕರೆಸಿಕೊಂಡಿದ್ದಾರೆ. ಈತನ ವಿಚಾರಣೆ ವೇಳೆ ಈ ನನಗೆ ಹಣ ಸೇರಿದ್ದು, ಉದ್ಯಮ ಹಾಗೂ ಜಾಗದ ಖರೀದಿಗಾಗಿ ಹಣ ತರಲಾಗಿದೆ ಎಂದು ಹೇಳಿದ್ದಾನೆ.
ಹವಾಲಾ ಹಣ ಅಕ್ರಮ ಸಾಗಾಟದ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲೂ ತನಿಖೆಯನ್ನು ನಡೆಸಲಾಗುತ್ತಿದೆ. ಹಣ ಸಾಗಾಟಕ್ಕೆ ಯಾವುದೇ ದಾಖಲೆ ಇಲ್ಲದೇ ಇರುವುದರಿಂದ ಹಣವನ್ನು ವಶಕ್ಕೆ ಪಡೆದಿದ್ದು, ಸೂಕ್ತ ದಾಖಲೆ ಕೇಳಲಾಗಿದೆ. ಆದರೆ ಇಂದು ಪತ್ತೆಯಾಗಿರುವ ಹಣಕ್ಕೂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನಲ್ಲಿ ಹಣ ಹಂಚಿಕೆಯ ಸಾಧ್ಯತೆಗೂ ಯಾವುದೇ ಸಂಬಂಧವಿಲ್ಲ ಎಂದು ವಿಚಾರಣೆಯಲ್ಲಿ ಭಾಗಿಯಾದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆರೋಪಿಗಳು ಜಾಗದ ಖರೀದಿಗಾಗಿ ಹಣ ತಂದಿರುವ ಬಗ್ಗೆ ಹೇಳುತ್ತಿದ್ದಾರೆ. ಬೈಂದೂರಿನಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಣದ ಹಂಚಿಕೆಗೆ ತಂದಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಉಡುಪಿ ಐಟಿ ಉಪವಿಭಾಗದ ವಾರ್ಡ್ 3 ರ ಹಿರಿಯ ಅಧಿಕಾರಿ ರಘಕಾಂತಪ್ಪ ಹೆಬ್ಬಾರ್, ಐಟಿಪಿ ಪರಿರ್ವಿಂಧರ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ವಿಚಾರಣೆ ನಡೆಸುತ್ತಿದ್ದಾರೆ.