ಗಾಂಧೀಜಿಯ ಅಹಿಂಸೆಯಿಂದ ಸ್ವಾತಂತ್ರ್ಯ ಬಂತು ಎನ್ನುವ ಕತೆ ಸೃಷ್ಟಿಸಲಾಗಿದೆ: ಡಾ. ಎಸ್.ಎಲ್.ಭೈರಪ್ಪ
ಬಂಟ್ವಾಳ, ನ. 2: ಗಾಂಧೀಜಿಯ ಅಹಿಂಸೆಯಿಂದ ಸ್ವಾತಂತ್ರ್ಯ ಬಂತು ಎನ್ನುವ ಕತೆ ಸೃಷ್ಟಿಸಲಾಗಿದೆ. ಬ್ರಿಟಿಷರು ಕೇವಲ ಅಹಿಂಸೆಯಿಂದಾಗಿ ಭಾರತವನ್ನು ಬಿಟ್ಟು ಹೋಗಿಲ್ಲ. ಸಿಪಾಯಿ ದಂಗೆ ಮಾದರಿಯಲ್ಲಿ ನಡೆದ ದಂಗೆಗೆ ಹೆದರಿ ಓಡಿದ್ದಾರೆ ಎಂದು ಕಾದಂಬರಿಕಾರ, ಸರಸ್ವತಿ ಸಮ್ಮಾನ ಪುರಸ್ಕೃತ, ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪ ಅವರು ಹೇಳಿದ್ದಾರೆ.
ಶುಕ್ರವಾರ ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಅವರು ಶಾಲೆಯ ಶೈಕ್ಷಣಿಕೆ ಚಟುವಟಿಕೆಯನ್ನು ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ನೈತಿಕ ಭಯ ನಮ್ಮೊಳಗಿರಬೇಕು. ಪಠ್ಯೇತರ ಚಟುವಟಿಕೆಗಳ ಮೂಲಕ ನೀತಿ ಬೆಳೆಸಬೇಕು ಎಂದರು.
ಬ್ರಿಟಿಷರು ಯಾವ ತಂತ್ರವನ್ನು ಅನುಸರಿಸಿದರೋ ಅದೇ ತಂತ್ರವನ್ನು ದೇಶದ ಮೊದಲ ಪ್ರಧಾನಿ ಅನುಸರಿಸಿದ್ದಾರೆ. ಈಗ ಕೂಡ ಚುನಾವಣೆಯಲ್ಲಿ ಅದೇ ತಂತ್ರ ನಡೆಸಲಾಗುತ್ತದೆ. ಪ್ರಸ್ತುತ ವಂಶ ಪಾರಂಪರ್ಯದ ರಾಜಕಾರಣವೇ ಮುಂದುವರಿದಿದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು. ಈ ಸಂದರ್ಭ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು. ಶಾಲಾ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವೇದಿಕೆಯಲ್ಲಿದ್ದರು. ಉಪನ್ಯಾಸಕ ಕೃಷ್ಣ ಪ್ರಸಾದ್ ನಿರೂಪಿಸಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಚಟುವಟಿಕೆಯ ಬಗ್ಗೆ ಹಲವು ವರ್ಷದಿಂದ ಕೇಳಿ ತಿಳಿದುಕೊಂಡಿದ್ದೆ. ಆದರೆ, ಕಳೆದ ವರ್ಷ ದೇವಸ್ಥಾನವೊಂದರಿಂದ ಶಾಲೆಗೆ ಊಟ ನಿಲ್ಲಿಸಿದ ವಿಚಾರದಿಂದ ಶಾಲೆಯ ಬಗ್ಗೆ ಪತ್ರಿಕೆ ಮೂಲಕ ಮತ್ತಷ್ಟು ತಿಳಿಯಿತು. ಆದರೆ, ಆಗಿನ ಮುಖ್ಯಮಂತ್ರಿ ಅವರು ಯಾಕೆ ಊಟ ನಿಲ್ಲಿಸಿದರು ಎಂದು ಗೊತ್ತಾಗಿರಲಿಲ್ಲ. ಇಂದು ಶಾಲೆಯ ಶೈಕ್ಷಣಿಕ ಚಟುವಟಿಕೆ ಹಾಗೂ ಮಕ್ಕಳಿಗೆ ಕಲಿಸಿಕೊಡುವ ಶಿಕ್ಷಣ, ಸಂಸ್ಕಾರವನ್ನು ಪ್ರತ್ಯಕ್ಷ ಕಂಡಾಗ ಸರಕಾರದ ಊಟ ಇಲ್ಲಿನ ಮಕ್ಕಳಿಗೆ ಯಾಕೆ ನಿಲ್ಲಿಸಿದರು ಎಂದು ಈಗ ನನಗೆ ಅರ್ಥವಾಯಿತು ಎಂದು ಭೈರಪ್ಪ ಹೇಳಿದರು.