ಮಂಗಳೂರು: ಪಿಯು ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ
ಮಂಗಳೂರು, ನ.2: ದ.ಕ. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿಕಾಸ್ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ2018-19ರ ಮಂಗಳೂರು ತಾಲೂಕು ಮಟ್ಟದ (ನಗರ) ಅಂತರ್ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಸೆನ್ನೆಲ್)ಮಂಗಳೂರು ಇದರ ಹಿರಿಯ ಕ್ರೀಡಾ ಸಹಾಯಕ ಹಾಗೂ ಆಟಮ್ನ್ ಫಿಟ್ನೆಸ್‌ನ ವ್ಯವಸ್ಥಾಪಕ ಸಲಹೆಗಾರ ವಿಕಾಸ್ ಎಂ. ಪುತ್ರನ್ ವಿಕಾಸ್ ಕಾಲೇಜಿನ ರಾಷ್ಟ್ರ ಹಾಗೂ ರಾಜ್ಯಮಟ್ಟದ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿ ಕ್ರೀಡಾಕೂಟ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಂತಹ ಕ್ರೀಡೆಗೆ ಹಿಂದಿನ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಇಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅವಕಾಶ ಸಿಕ್ಕಲ್ಲೆಲ್ಲಾ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಯುವ ಸಮುದಾಯ ಈ ದೇಶದ ಸಂಪತ್ತು. ಇಲ್ಲಿನ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ರಾರಾಜಿಸಬೇಕು. ಸಾಮಾನ್ಯ ವಿದ್ಯಾರ್ಥಿಗೂ ಸಾಕಷ್ಟು ಪ್ರೋತ್ಸಾಹ ದೊರೆತು ಎಲ್ಲ ಕ್ಷೇತ್ರದಲ್ಲಿ ಮಿಂಚುವಂತಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಧನ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.
ವಿಕಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಜೆ.ಕೊರಗಪ್ಪ, ಸೂರಜ್ ಕಲ್ಯ, ವಿಕಾಸ್ ಎಜೂ ಸೊಲ್ಯುಷನ್ ನಿರ್ದೇಶಕ ಡಾ.ಅನಂತ್‌ಪ್ರಭು ಜಿ., ವಿಕಾಸ್ ಸಮೂಹ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಕಾಮರ್ಸ್ ಇನ್‌ಚಾರ್ಜ್ ಐಶ್ವರ್ಯ ರಾವ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಉಪಸ್ಥಿತರಿದ್ದರು.
ವಿಕಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ. ರಾಜಾರಾಮ್ ರಾವ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಅಜಿತ್ ರೈ ನಿರೂಪಿಸಿದರು.