ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತನಿಗೆ ಸನ್ಮಾನ
ಮಂಗಳೂರು, ನ.2: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸ್ಕೇಟಿಂಗ್ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆದ ಯೆನೆಪೊಯ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಶಾಮಿಲ್ ಅರ್ಷದ್ ಅವರನ್ನು ಯೆನೆಪೊಯ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಲಾಡಳಿತದಿಂದ ಸನ್ಮಾನಿಸಲಾಯಿತು.
ಈತ ಸ್ಕೇಟಿಂಗ್‌ನಲ್ಲಿ ಈವರೆಗೆ ರಾಷ್ಟ್ರಮಟ್ಟದಲ್ಲಿ 10 ಪದಕಗಳನ್ನು, ದಕ್ಷಿಣ ವಲಯ ಸಿಬಿಎಸಿಇನಲ್ಲಿ 8 ಪದಕಗಳನ್ನು, ರಾಜ್ಯಮಟ್ಟದಲ್ಲಿ 15 ಪದಕಗಳನ್ನು, ಜಿಲ್ಲಾ ಮಟ್ಟದಲ್ಲಿ 19 ಪದಕಗಳನ್ನು, ಅಂತರ್ ಶಾಲಾ ಮಟ್ಟದಲ್ಲಿ 14 ಪದಕಗಳನ್ನು, ವೈಯಕ್ತಿಕ ಚಾಂಪಿಯನ್ 17 ಬಾರಿ ಗಳಿಸಿದ್ದು ಒಟ್ಟು 83ಕ್ಕೂ ಹೆಚ್ಚಿನ ಪದಕಗಳನ್ನು ಪಡೆದಿದ್ದಾರೆ.
ಮಂಗಳೂರಿನಲ್ಲಿರುವ ರೋಲರ್ ಸ್ಕೇಟಿಂಗ್ ಕ್ರೀಡೆಯ 27 ವರ್ಷದ ಇತಿಹಾಸದಲ್ಲಿ 2016-17ರ ಸಾಲಿನಲ್ಲಿ 3 ಚಿನ್ನದ ಪದಕಗಳನ್ನು ಗಳಿಸುವುದರ ಮೂಲಕ ದ.ಕ. ಜಿಲ್ಲೆಯಿಂದ ಆಯ್ಕೆಗೊಂಡ ವೈಯಕ್ತಿಕ ರಾಷ್ಟ್ರೀಯ ಚಾಂಪಿಯನ್‌ಶಿಪ್ ಪಡೆದ ಮೊದಲ ಸ್ಕೇಟರ್ ಎನಿಸಿಕೊಂಡಿದ್ದಾರೆ.
ಈ ಸನ್ಮಾನ ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲ ಜೋಸೆಫ್ ಮೆಚಿರಾತ್ ಜೋಸೆಫ್, ಶಾಲಾ ಕ್ಯಾಂಪಸ್ ನಿರ್ದೇಶಕಿ ಮಿಶ್ರಿಯಾ ಜಾವೆದ್, ಶಾಲಾ ಕಾರ್ಯಕ್ರಮ ನಿರ್ವಾಹಕಿ ರೇಷ್ಮಾ ನಾಯಕ್ ಹಾಗೂ ಸನ್ಮಾನಿತನ ಪೋಷಕರು ಉಪಸ್ಥಿತರಿದ್ದರು.