ಮಧ್ಯರಾತ್ರಿ ಒಂಟಿ ಯುವತಿಯಿಂದ ಬಾಡಿಗೆ ಪಡೆಯಲು ನಿರಾಕರಿಸಿದ ರಿಕ್ಷಾ ಚಾಲಕ
ಹೊಸದಿಲ್ಲಿ,ನ.3: ದೇಶಾದ್ಯಂತ ಹೆಚ್ಚಿನ ಯುವತಿಯರು ಮತ್ತು ಮಹಿಳೆಯರ ಪಾಲಿಗೆ ರಾತ್ರಿ ಪ್ರಯಾಣ ಈಗಲೂ ಆತಂಕಕಾರಿಯಾಗಿದೆ. ಅಲ್ಲಲ್ಲಿ ದಿನವೂ ಎಂಬಂತೆ ಸಂಭವಿಸುತ್ತಿರುವ ಘಟನೆಗಳಿಂದಾಗಿ ಇಂತಹ ಆತಂಕಗಳು ಸಕಾರಣವೇ ಆಗಿವೆ. ಆದರೂ ರಾತ್ರಿ ವೇಳೆ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ಅವರ ತಾಣಗಳಿಗೆ ಸುರಕ್ಷಿತವಾಗಿ ತಲುಪಿಸುವ ಸಹೃದಯಿಗಳೂ ಇದ್ದಾರೆ. ಇಂತಹ ಹೃದಯಸ್ಪರ್ಶಿ ಘಟನೆಯೊಂದು ದಿಲ್ಲಿಯಲ್ಲಿ ಇತ್ತೀಚಿಗೆ ನಡೆದಿದೆ. ಮಧ್ಯರಾತ್ರಿಯ ಬಳಿಕ ತನ್ನ ಕಚೇರಿಯಿಂದ ಹೊರಬಿದ್ದಿದ್ದ ಯುವತಿಯನ್ನು ಆಟೋ ಚಾಲಕನೋರ್ವ ಸುರಕ್ಷಿತವಾಗಿ ಮನೆ ತಲುಪಿಸಿದ್ದಷ್ಟೇ ಅಲ್ಲದೆ ಆಕೆಯಿಂದ ಬಾಡಿಗೆಯನ್ನು ಪಡೆಯಲೂ ನಿರಾಕರಿಸಿ ಮಾನವೀಯತೆಯನ್ನು ಮೆರೆದಿದ್ದಾನೆ.
ತನ್ನ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಕೋಲ್ಕತಾ ಮೂಲದ ನೇಹಾ ದಾಸ್ ಆಟೋ ಚಾಲಕ ಪ್ರವೀಣ್ ರಂಜನ್ ಕುರಿತು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಅಂತಹ ವ್ಯಕ್ತಿಯನ್ನು ಭೇಟಿಯಾಗಿದ್ದಕ್ಕೆ ಸಂತಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ದಾಸ್ ಮಧ್ಯರಾತ್ರಿಯ ಸುಮಾರಿಗೆ ತನ್ನ ಕಚೇರಿಯಿಂದ ಹೊರಬಿದ್ದಾಗ ತೀವ್ರಗೊಳ್ಳುತ್ತಿರುವ ಚಳಿಯಿಂದಾಗಿ ರಸ್ತೆಗಳಲ್ಲಿ ಒಂದು ಪಿಳ್ಳೆಯೂ ಇರಲಿಲ್ಲ. ಕಚೇರಿಯ ಹೊರಗೆ ಆಟೋಕ್ಕಾಗಿ ಕಾಯುತ್ತಿದ್ದಾಗ ಪ್ರವೀಣ ರಂಜನ್ ತನ್ನ ರಿಕ್ಷಾವನ್ನು ನಿಲ್ಲಿಸಿದ್ದ. ಬಾಡಿಗೆಯನ್ನು ವಿಚಾರಿಸಿದಾಗ ,‘ಮೇಡಂ,ಇಷ್ಟು ರಾತ್ರಿಯಲ್ಲಿ ನಾನು ಹುಡುಗಿಯರಿಂದ ಬಾಡಿಗೆ ಪಡೆಯುವುದಿಲ್ಲ. ಅವರನ್ನು ಸುರಕ್ಷಿತವಾಗಿ ಮನೆ ತಲುಪಿಸುವುದು ಮುಖ್ಯವಾಗಿದೆ’ ಎಂದು ಆತ ಉತ್ತರಿಸಿದ್ದ. ದಾಸ್ ಅವರ ಫೇಸಬುಕ್ ಪೋಸ್ಟ್ ಆನ್‌ಲೈನ್‌ನಲ್ಲಿ ಬಹಳಷ್ಟು ಗಮನ ಸೆಳೆದುಕೊಂಡಿದೆ.
‘ಕೆಟ್ಟ ಜನರೇ ತುಂಬಿಕೊಂಡಿರುವ ದಿಲ್ಲಿಯಲ್ಲಿ ಇಂತಹವರೂ ಇದ್ದಾರೆ. ಆತ ನನ್ನಿಂದ ಬಾಡಿಗೆಯನ್ನು ಪಡೆಯಲಿಲ್ಲ. ನನ್ನನ್ನು ಸುರಕ್ಷಿತವಾಗಿ ಮನೆ ತಲುಪಿಸುವುದು ಆತನ ಮೊದಲ ಆದ್ಯತೆಯಾಗಿತ್ತು’ಎಂದಿರುವ ದಾಸ್,ಆತ ನಿಜಕ್ಕೂ ಮನುಷ್ಯನೇ ಆಗಿದ್ದನೇ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.