×
Ad

'ಪ.ಪೂ.ಕಾಲೇಜುಗಳ ರಜಾ ವ್ಯವಸ್ಥೆ ಹಳೆ ಮಾದರಿಯಲ್ಲೇ ಮುಂದುವರಿಸಿ'

Update: 2018-11-03 20:50 IST

ಮಂಗಳೂರು, ನ. 3: ಪದವಿಪೂರ್ವ ಕಾಲೇಜುಗಳ ರಜಾ ವ್ಯವಸ್ಥೆ ಅವೈಜ್ಞಾನಿಕವಾಗಿದೆ. ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೂ ಇದರಿಂದ ತೊಡಕುಂಟಾಗಿದೆ. ಹಾಗಾಗಿ ಈ ಹಿಂದಿನಂತೆಯೇ ಏಕರೂಪದ ರಜಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಇಲ್ಲದಿದದ್ರೆ ರಜಾ ರಹಿತ ಇಲಾಖೆಯೆಂದು ಪರಿಗಣಿಸಿ ಸಂಬಂಧಿಸಿದ ರಜಾ ಸೌಲಭ್ಯವನ್ನು ನೀಡಬೇಕು ಎಂದು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಆಗ್ರಹಿಸಿದೆ.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರೊಂದಿಗೆ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ದ.ಕ.ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ವತಿಯಿಂದ ಶನಿವಾರ ನಡೆದ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜ.31ರಿಂದ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.1ರಿಂದ ನಡೆಸುವ ಅವೈಜ್ಞಾನಿಕ ತೀರ್ಮಾನವನ್ನು ಇಲಾಖೆ ಕೈಗೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಸಮಯವಕಾಶ ಇಲ್ಲದಂತಾಗಿದೆ. ತರಗತಿಗಳನ್ನು ಜೂ.1ರಿಂದ ಪ್ರಾರಂಭಿಸಬೇಕು. ಅಕ್ಟೋಬರ್‌ನಲ್ಲ ಕನಿಷ್ಠ 27 ದಿನಗಳಾದರೂ ರಜೆ ನೀಡಬೇಕು ಎಂದು ಸಂಘದ ಮುಖಂಡರು ಮನವಿ ಸಲ್ಲಿಸಿದರು.

ಕಳೆದ 25 ವರ್ಷಗಳಿಂದ ಪದವಿಪೂರ್ವ ಕಾಲೇಜು ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಣೆಗೆ ಹೋರಾಟ ನಡೆಸಿದ್ದರೂ ಪರಿಹಾರವಾಗಿಲ್ಲ. ಕುಮಾರ ನಾಯಕ್ ವರದಿಯಂತೆ ಎಲ್ಲ ಉಪನ್ಯಾಸಕರಿಗೆ ಹಾಗೂ ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಬೇಕು. ಈಗಾಗಲೇ ನೀಡಿರುವ ಎರಡು ವೇತನ ಭಡ್ತಿಗಳನ್ನು 2008 ಆ.1ರ ನಂತರದ ಉಪನ್ಯಾಸಕರಿಗೂ ವಿಸ್ತರಿಸಿ, ಹೊಸ ವೇತನ ಶ್ರೇಣಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಕೇರಳ ಮಾದರಿಯಲ್ಲಿ ಶೈಕ್ಷಣಿಕ ವೇಳಾಪಟ್ಟಿ ನಿಗದಿಪಡಿಸಬೇಕು. ದಾಖಲಾತಿ ಸಂದರ್ಭ ದಂಡ ಶುಲ್ಕ ರದ್ದು ಮಾಡಬೇಕು. ವಿಷಯವಾರು ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಾಗಾರ ಮಾಡಬೇಕು. ವಾರದಲ್ಲಿ ಮೂರು ದಿನ ಬೇರೆ ಕಾಲೇಜುಗಳಿಗೆ ಉಪನ್ಯಾಸಕರ ನಿಯೋಜನೆ ರದ್ದು ಮಾಡಬೇಕು. ಎಲ್ಲ ಕಾಲೇಜುಗಳಿಗೆ ದೈಹಿಕ ಶಿಕ್ಷಕರ ನೇಮಕ ಮಾಡಬೇಕು. 15 ವರ್ಷ ಮೇಲ್ಪಟ್ಟ ಕಾಲೇಜುಗಳಿಗೆ ಶಾಶ್ವತ ಮಾನ್ಯತೆ ನೀಡಬೇಕು. ವಿದ್ಯಾರ್ಥಿ ಸ್ನೇಹಿ ಪಠ್ಯಕ್ರಮ ಅನುಸರಿಸಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಬೇಕು ಮೊದಲಾದ ಬೇಡಿಕೆಗಳನ್ನು ಭೋಜೇಗೌಡರಿಗೆ ಸಲ್ಲಿಸಲಾಯಿತು.

ಉಪನ್ಯಾಸಕರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಭೋಜೇಗೌಡರು ಹಲವಾರು ಬೇಡಿಕೆಗಳು ಸಲ್ಲಿಕೆಯಾಗಿವೆ. ಪರಿಶೀಲಿಸಿ ತುರ್ತು ಆಗಬೇಕಾದ ಬೇಡಿಕೆಗಳನ್ನು ಈಡೇರಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು. ಉಳಿದ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಕೆ. ಉಪಾಧ್ಯಾಯ ಸ್ವಾಗತಿಸಿದರು. ಕೆ.ಎನ್.ಗಂಗಾಧರ ಆಳ್ವ ವಂದಿಸಿದರು. ಡಾ.ಕಿಶೋರ್ ಕುಮಾರ್ ರೈ ಶೇಣಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಎಸ್.ಎಲ್.ಭೋಜೇಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತ ಅಶ್ಫಾಕ್ ಅಹ್ಮದ್ ಮ್ಯಾಗೇರಿ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ರಾವ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News