×
Ad

ಉದ್ಯಮಗಳ ಬೆಳವಣಿಗೆಯಿಂದ ರಾಷ್ಟ್ರಾಭಿವೃದ್ಧಿ: ಮಹಾಬಲೇಶ್ವರ

Update: 2018-11-03 21:20 IST

ಮಂಗಳೂರು, ನ.3: ಸಣ್ಣ ಮತ್ತು ಮಧ್ಯಮ ಹಾಗೂ ಮೈಕ್ರೊ ಉದ್ಯಮಗಳು ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ತಂತ್ರಜ್ಞಾನದ ಅಳವಡಿಕೆ ಹಾಗೂ ಹೆಚ್ಚಿನ ಪ್ರೋತ್ಸಾಹ ಹಾಗೂ ಹೆಚ್ಚಿನ ಗಮನದಿಂದ ಈ ಉದ್ಯಮಗಳ ಬೆಳವಣಿಗೆಯಿಂದ ದೇಶವೂ ಅಭಿವೃದ್ಧಿಯಾಗಲಿದೆ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್.ಹೇಳಿದರು.

ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಹಾಗೂ ಕರ್ನಾಟಕ ಬ್ಯಾಂಕ್ ಸಹಯೋಗದಲ್ಲಿ ಶನಿವಾರ ನಡೆದ ನಿಟ್ಟೆ ಕೆಬಿಎಲ್ ಎಂಎಸ್‌ಎಂಇ ಕಾಂಕ್ಲೇವ್ ಆ್ಯಂಡ್ ಬ್ಯುಸಿನೆಸ್ ಆವಾರ್ಡ್ಸ್ 2018 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಸಾಲ ಪಡೆಯಲು ಮೂವತ್ತರಿಂದ ನಲವತ್ತು ದಿನಗಳವರೆಗೆ ಕಾಯಬೇಕಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆಯಂತೆ 59 ನಿಮಿಷದೊಳಗೆ 1ಕೋಟಿ ರೂ. ಸಾಲವನ್ನು ನೀಡುವಂತೆ ಘೋಷಣೆ ಮಾಡಿದ್ದು, ಆರ್ಥಿಕತೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಹೊಸದಾಗಿ ಬ್ಯಾಂಕಿಂಗ್ ವಲಯದಲ್ಲಿ ಬ್ಯುಸಿನೆಸ್ ರೂಲ್ ಇಂಜಿನ್ ತಂತ್ರಜ್ಞಾನದ ಅಳವಡಿಕೆಯಿಂದ ಕೇವಲ 20 ನಿಮಿಷದಲ್ಲಿ ಉದ್ಯಮ ಆರಂಭಿಸಲು ಸಾಲ ನೀಡಲು ಸಾಧ್ಯವಾಗಲಿದೆ. ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಇರುವ ಜ್ಞಾನವನ್ನು ಅನುಷ್ಠಾನಗೊಳಿಸಲು ಬಂಡವಾಳ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಬಂಡವಾಳವನ್ನು ಒದಗಿಸಲು ನೂತನ ತಂತ್ರಜ್ಞಾನಗಳು ವರದಾನವಾಗಲಿದೆ ಎಂದರು.

ಸಣ್ಣ ಮತ್ತು ಮಧ್ಯಮ, ಮೈಕ್ರೊ ಉದ್ಯಮಗಳು ಹೆಚ್ಚಿನ ಉದ್ಯೋಗ ಒದಗಿಸುತ್ತಿವೆ. ಸಾವಿರಾರು ಜನರ ಜೀವನಾಧಾರವಾಗಿದೆ. ಅರೆನಗರ ಹಾಗೂ ಗ್ರಾಮೀಣ ಭಾಗದಲ್ಲಿಯೂ ಉದ್ಯಮಗಳ ಬೆಳವಣಿಗೆಯಿಂದ ನಿರುದ್ಯೋಗದಿಂದ ವಲಸೆ ಹೋಗುವ ಸಮಸ್ಯೆಯು ನಿವಾರಣೆಯಾಗಲಿದೆ ಹಾಗೂ ಆರ್ಥಿಕ ಸುಸ್ಥಿರತೆಯನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಾರ್ಪೊರೇಟ್ ಪ್ರೊಗ್ರಾಂಸ್ ಡೀನ್ ಡಾ.ಎ.ಪಿ.ಆಚಾರ್ ಪ್ರಾಸ್ತಾವಿಕ ಮಾತನಾಡಿದರು. ಎಂಆರ್‌ಪಿಎಲ್‌ನ ಸುರೇಶ್ ರಾವ್, ಉದ್ಯಮ ತಜ್ಞ ಶ್ರೀಕಾಂತ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ದೇಶಕ ಡಾ.ಕೆ.ಸಂಕರನ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News