ಮಿಯಾಮಿ ಏರ್‌ಪೋರ್ಟ್ ಸ್ಫೋಟಿಸುವ ಬೆದರಿಕೆ: ಉತ್ತರಪ್ರದೇಶದ ವ್ಯಕ್ತಿಯ ಬಂಧನ

Update: 2018-11-03 15:53 GMT

ಲಕ್ನೋ, ನ. 3: ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಹಲವು ಬಾರಿ ಕರೆ ಮಾಡಿದ ಇಲ್ಲಿನ 18 ವರ್ಷದ ವ್ಯಕ್ತಿಯೋರ್ವನನ್ನು ಉತ್ತರಪ್ರದೇಶದ ಎಟಿಎಸ್ ಶನಿವಾರ ವಶಕ್ಕೆ ತೆಗೆದುಕೊಂಡಿದೆ. ಬಂಧಿತನ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಟಿಎಸ್‌ನ ಅಧಿಕಾರಿ ಅಸೀಮ್ ಅರುಣ್ ತಿಳಿಸಿದ್ದಾರೆ.

ಆರೋಪಿ 3000 ಅಮೆರಿಕನ್ ಡಾಲರ್ ಮೌಲ್ಯದ ಬಿಟ್ ಕಾಯಿನ್ ಖರೀದಿಸಿದ್ದ. ಆದರೆ, ಈ ಪ್ರಕ್ರಿಯೆಯಲ್ಲಿ ಅವರಿಗೆ ಕೆಲವರು ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆತ ಅಮೆರಿಕದ ಎಫ್‌ಬಿಐಯಲ್ಲಿ ದೂರು ದಾಖಲಿಸಿದ್ದ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಹತಾಶೆಗೊಳಗಾದ ಆರೋಪಿ ಮಿಯಾಮಿ ವಿಮಾನ ನಿಲ್ದಾಣಕ್ಕೆ ಹಲವು ಬಾರಿ ಕರೆ ಮಾಡಿದ್ದ ಹಾಗೂ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ. ‘‘ಎ.ಕೆ.47, ಗ್ರೆನೆಡ್, ಸುಸೈಡ್ ಬೆಲ್ಟ್‌ನೊಂದಿಗೆ ಬರುತ್ತೇನೆ. ಎಲ್ಲರನ್ನೂ ಕೊಲ್ಲುತ್ತೇನೆ’’ ಎಂದು ಆರೋಪಿ ಬೆದರಿಕೆ ಒಡ್ಡಿದ್ದ. ಬಳಿಕ ದೂರಿಗೆ ಸ್ಪಂದಿಸಿ ಎಫ್‌ಬಿಐ ಆತನೊಂದಿಗೆ ಮಾತನಾಡಿದೆ. ಆದರೂ ಆತ ಇಂಟರ್‌ನೆಟ್ ಪ್ರೊಟೊಕಾಲ್ ಮೂಲಕ ಮಿಯಾಮಿ ವಿಮಾನ ನಿಲ್ದಾಣಕ್ಕೆ ನಿರಂತರ ಕರೆ ಮಾಡಿ ಬೆದರಿಕೆ ಒಡ್ಡಿದ್ದ.

ಅಕ್ಟೋಬರ್ 2 ಹಾಗೂ 31ರ ನಡುವೆ ಆತ ಮತ್ತೆ ಮತ್ತೆ ಕರೆ ಮಾಡಿದ್ದ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಅನಂತರ ಆರೋಪಿಯನ್ನು ಐಪಿ ವಿಳಾಸದ ಆಧಾರದಲ್ಲಿ ಉತ್ತರಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡರು. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News