ನಾಪತ್ತೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿ ಐಸಿಸ್ ಸೇರ್ಪಡೆಯ ಶಂಕೆ

Update: 2018-11-03 16:03 GMT

ಲಕ್ನೊ , ನ.2: ಉತ್ತರಪ್ರದೇಶದ ಖಾಸಗಿ ವಿವಿಯಿಂದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಶ್ಮೀರದ ವಿದ್ಯಾರ್ಥಿಯೊಬ್ಬನ ಫೋಟೋ ಐಸಿಸ್ ಧ್ಜಜದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈತ ಭಯೋತ್ಪಾದಕರ ಸಂಘಟನೆ ಸೇರಿಕೊಂಡಿದ್ದಾನೆ ಎನ್ನಲಾಗಿದೆ.

ಜಮ್ಮು-ಕಾಶ್ಮೀರದ ಶ್ರೀ ನಗರದ ನಿವಾಸಿ ಎಹ್ತೆಶಾಮ್ ಬಿಲಾಲ್ ಸೂಫಿ(17 ವರ್ಷ)ಗ್ರೇಟರ್ ನೊಯ್ಡೆದ ಶಾರದಾ ವಿವಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಅ.28ರಂದು ದಿಲ್ಲಿಗೆ ಹೋಗುವುದಾಗಿ ವಿವಿ ಅಧಿಕಾರಿಗಳಿಂದ ಅನುಮತಿ ಪಡೆದು ತೆರಳಿದ್ದವ ನಾಪತ್ತೆಯಾಗಿದ್ದ. ಅ.27ರಂದು ವಿವಿ ಆವರಣದಲ್ಲಿ ಅಪ್ಘಾನಿಸ್ತಾನ ಹಾಗೂ ಭಾರತದ ವಿದ್ಯಾರ್ಥಿಗಳ ಮಧ್ಯೆ ನಡೆದಿದ್ದ ಘರ್ಷಣೆಯಲ್ಲಿ ಈತನ ಹೆಸರನ್ನೂ ಆರೋಪಿಗಳ ಪಟ್ಟಿಯಲ್ಲಿ ತಪ್ಪಾಗಿ ಸೇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈತ ನಾಪತ್ತೆಯಾಗಿರುವುದಾಗಿ ಗ್ರೇಟರ್‌ನೊಯ್ಡಾದ ನಾಲೆಜ್‌ಪಾರ್ಕ್ ಪೊಲೀಸ್ ಠಾಣೆ ಹಾಗೂ ಶ್ರೀನಗರದ ಖನ್ಯಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಕಪ್ಪು ಬಟ್ಟೆ ಧರಿಸಿಕೊಂಡಿರುವ ಬಿಲಾಲ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ತಾನು ಐಸಿಸ್ ಸಿದ್ಧಾಂತದಿಂದ ಪ್ರಭಾವಿತವಾಗಿರುವ ಉಗ್ರರ ಸಂಘಟನೆ ಐಎಸ್‌ಜೆಕೆ ತಂಡವನ್ನು ಸೇರಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

ಈತನ ಮೊಬೈಲ್ ಫೋನ್‌ನ ಜಾಡು ಪತ್ತೆಹಚ್ಚಿದಾಗ ಈತ ಉಗ್ರರ ಚಟುವಟಿಕೆ ಮಿತಿಮೀರಿರುವ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಇರುವ ಮಾಹಿತಿ ಲಭ್ಯವಾಗಿದೆ ಎಂದು ಉ.ಪ್ರ. ಭಯೋತ್ಪಾದನಾ ನಿಗ್ರಹ ದಳದ ಐಜಿ ಅಸೀಮ್ ಅರುಣ್ ತಿಳಿಸಿದ್ದಾರೆ. ಅ.28ರಂದು ದಿಲ್ಲಿಗೆ ತೆರಳಿದ್ದ ಬಿಲಾಲ್ ಅಲ್ಲಿಂದ ವಿಮಾನದ ಮೂಲಕ ಪುಲ್ವಾಮ ಜಿಲ್ಲೆಗೆ ಆಗಮಿಸಿದ್ದಾನೆ. ಪುಲ್ವಾಮಕ್ಕೆ ಬಂದ ಬಳಿಕ ಅಂದು ಸಂಜೆ 4:30ರ ವೇಳೆಗೆ ತನ್ನ ತಂದೆಯೊಂದಿಗೆ ಕೊನೆಯ ಬಾರಿ ಮಾತನಾಡಿದ್ದ ಸೂಫಿ, ತಾನು ದಿಲ್ಲಿಯಲ್ಲಿದ್ದು ರೈಲಿನ ಮೂಲಕ ವಿವಿಗೆ ತೆರಳುತ್ತಿರುವುದಾಗಿ ತಿಳಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News