ಪಂಜಾಬ್‌ನಲ್ಲಿ ದಂಗೆ ಸೃಷ್ಟಿಸಲು ಬಾಹ್ಯ ಸಂಪರ್ಕಗಳ ಮೂಲಕ ಯತ್ನ: ಸೇನಾ ಮುಖ್ಯಸ್ಥ ಎಚ್ಚರಿಕೆ
ಹೊಸದಿಲ್ಲಿ,ನ.3: ಪಂಜಾಬ್‌ನಲ್ಲಿ ದಂಗೆ ಸೃಷ್ಟಿಸಲು ಬಾಹ್ಯ ಸಂಪರ್ಕಗಳ ಮೂಲಕ ಪ್ರಯತ್ನಿಸಲಾಗುತ್ತಿದೆ. ಕೂಡಲೇ ಇದರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಬಹಳ ವಿಳಂಬವಾಗಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಶನಿವಾರ ಎಚ್ಚರಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಶನಿವಾರ, ಭಾರತದಲ್ಲಿ ಆಂತರಿಕ ಭದ್ರತೆಯ ಬದಲಾಗುತ್ತಿರುವ ಬಾಹ್ಯರೇಖೆಗಳು: ವಿನ್ಯಾಸ ಮತ್ತು ಸ್ಪಂದನೆ ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಹಿರಿಯ ಸೇನಾಧಿಕಾರಿಗಳು, ರಕ್ಷಣಾ ತಜ್ಞರು ಮತ್ತು ಮಾಜಿ ಹಿರಿಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುವ ವೇಳೆ ಅವರು ಈ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಅಸ್ಸಾಂನಲ್ಲೂ ಬಾಹ್ಯ ಸಂಪರ್ಕಗಳ ಮತ್ತು ಬಾಹ್ಯ ಪ್ರಚೋದನೆಯ ಮೂಲಕ ದಂಗೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂದು ರಾವತ್ ತಿಳಿಸಿದ್ದಾರೆ. ಸದ್ಯ ಪಂಜಾಬ್ ಶಾಂತವಾಗಿದೆ. ಆದರೆ ಕೆಲವರು ಬಾಹ್ಯ ಸಂಪರ್ಕಗಳ ಮೂಲಕ ಇಲ್ಲಿ ಮತ್ತೆ ಹಿಂಸಾಚಾರ, ಬಂಡಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾವತ್ ತಿಳಿಸಿದ್ದಾರೆ.
1980ರಲ್ಲಿ ಖಾಲಿಸ್ತಾನ ಚಳುವಳಿಯ ಸಮಯದಲ್ಲಿ ನಡೆದ ದಂಗೆಗಳು ಪಂಜಾಬ್‌ನಲ್ಲಿ ಈವರೆಗೆ ನಡೆದ ಅತ್ಯಂತ ಭೀಕರ ಹಿಂಸಾಚಾರವಾಗಿದೆ. 2020ರಲ್ಲಿ ಜನಮತ ಸಂಗ್ರಹಕ್ಕೆ ಆಗ್ರಹಿಸಿ ಬ್ರಿಟನ್‌ನಲ್ಲಿ ಇತ್ತೀಚೆಗೆ ನಡೆದ ಖಾಲಿಸ್ತಾನಪರ ರ್ಯಾಲಿಯ ಹಿನ್ನೆಲೆಯಲ್ಲಿ ರಾವತ್ ಈ ಆತಂಕ ವ್ಯಕ್ತಪಡಿಸಿದ್ದಾರೆ. ಈ ಚಳುವಳಿಗೆ ಪ್ರತಿಯಾಗಿ ಭಾರತೀಯರು, ಲವ್ ಮೈ ಇಂಡಿಯ ಮತ್ತು ವಿ ಸ್ಟಾಂಡ್ ವಿದ್ ಇಂಡಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.