ಯಕ್ಷಗಾನ ಕಲಾವಿದ ಮಾಧವ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ ಪ್ರದಾನ
ಉಡುಪಿ, ನ.3: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಬಂಗಾರಮಕ್ಕಿ ಶ್ರೀವೀರಾಂಜನೆಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ ಉಡುಪಿ ಚಿಟ್ಟಾಣಿ ಅಭಿಮಾನಿ ಬಳಗ ವತಿಯಿಂದ ಚಿಟ್ಟಾಣಿ ಸಂಸ್ಮರಣ ಸಪ್ತಾಹದ ಸಮಾರೋಪ ಸಮಾರಂಭವು ಶನಿವಾರ ರಾಜಾಂಗಣದಲ್ಲಿ ಜರಗಿತು.
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಾಧವ ಹೆಗಡೆ ಅವರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಹಾಗೂ ಮಧುಕರ ಮಲ್ಯ ಬೆಳ್ತಂಗಡಿ ಅವರಿಗೆ ಟಿ.ವಿ.ರಾವ್ ಪ್ರಶಸ್ತಿಯನ್ನು ಪರ್ಯಾಯ ಪಲಿ ಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಪ್ರದಾನ ಮಾಡಿದರು.
ಯಕ್ಷಗಾನ ಕಲೆ ಎಂಬುದು ಎಲ್ಲ ರುಚಿಯನ್ನು ಹೊಂದಿರುವ ಚಿತ್ತಾನ್ನದಂತೆ. ಈ ಕಲೆಯಲ್ಲಿ ಬಣ್ಣ, ವೇಷ, ಕುಣಿತ, ತಾಳ, ಭಾಗವತಿಕೆ ಎಲ್ಲವೂ ಒಳ ಗೊಂಡಿದೆ. ಅದ್ಭುತ ಕಲಾವಿದ ಚಿಟ್ಟಾಣಿಯಂತಹ ಹಲವು ಕಲಾವಿದರು ಸೃಷ್ಠಿಯಾಗಲಿ ಎಂದು ಸ್ವಾಮೀಜಿ ಹಾರೈಸಿದರು.
ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅನು ಗ್ರಹ ಸಂದೇಶ ನೀಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಣೇಶ್ ರಾವ್, ನ್ಯಾಯವಾದಿ ರವಿರಾಜ ಕುಮಾರ್, ಉಡುಪಿ ಹೈಟೆಕ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಟಿ.ಎಸ್.ರಾವ್ ಮುಖ್ಯ ಅತಿಥಿಗಳಾಗಿದ್ದರು.
ಬಂಗಾರಮಕ್ಕಿ ಶ್ರೀವೀರಾಂಜನೆಯ ಯಕ್ಷಮಿತ್ರ ಮಂಡಳಿಯ ಸಂಚಾಲಕ ಸುಬ್ರಹ್ಮಣ್ಯ ಚಿಟ್ಟಾಣಿ, ಅಭಿಮಾನಿ ಬಳಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಗೋಪಿಕೃಷ್ಣ ರಾವ್, ಕಲಾರಂಗದ ಉಪಾಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿದ್ದರು. ನಾರಾಯಣ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂ ಪಿಸಿದರು. ಬಳಿಕ ‘ರಾಜಾ ಬೃಹದ್ರಥ’ ಯಕ್ಷಗಾನ ಪ್ರದರ್ಶನ ನಡೆಯಿತು.