ಕಟೀಲು ಶ್ರೀದುರ್ಗಾ ಮಕ್ಕಳ ಮೇಳಕ್ಕೆ ವಿಶ್ವೇಶತೀರ್ಥ ಪ್ರಶಸ್ತಿ
ಉಡುಪಿ, ನ.3: ಉಡುಪಿ ಯಕ್ಷಗಾನ ಕಲಾರಂಗ ಕಳೆದ ಹದಿನೆಂಟು ವರ್ಷಗಳಿಂದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಹೆಸರಿನಲ್ಲಿ ಯಕ್ಷಗಾನ ಕಲಿಕಾ ಸಂಘಟನೆಗೆ ನೀಡುತ್ತಿರುವ ಪ್ರಶಸ್ತಿಗೆ ಈ ಬಾರಿ ಕಟೀಲಿನ ಶ್ರೀದುರ್ಗಾ ಮಕ್ಕಳ ಮೇಳವನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ 50,000 ರೂ. ನಗದನ್ನು ಹೊಂದಿದೆ. ದುರ್ಗಾ ಮಕ್ಕಳ ಮೇಳ ಒಂದು ದಶಕದಲ್ಲಿ ಇಪ್ಪತ್ತಕ್ಕೂ ಅಧಿಕ ಪೌರಾಣಿಕ ಪ್ರಸಂಗಗಳ ಸುಮಾರು 275 ಪ್ರದರ್ಶನಗಳನ್ನು ನೀಡಿದೆ. ಶಾಲೆಯ ವಿದ್ಯಾರ್ಥಿ ಗಳಿಗೆ ಶನಿವಾರ-ರವಿವಾರ ತರಬೇತಿ ನೀಡಿ ಮಕ್ಕಳಲ್ಲಿ ಯಕ್ಷಗಾನಾಸಕ್ತಿ ಹಾಗೂ ಪರಿಣತಿ ಬೆಳೆಸುವಲ್ಲಿ ನಿರತವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನ.25ರ ರವಿವಾರ ಸಂಜೆ 6:30ಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.