×
Ad

‘ಆಪ್ತ ಮಿತ್ರ’ ಚೀನಾದಿಂದ ಪಾಕ್‌ಗೆ ಆರ್ಥಿಕ ನೆರವಿನ ಘೋಷಣೆ: 6 ಶತಕೋಟಿ ಡಾಲರ್ ನೆರವು ಪ್ರಕಟ

Update: 2018-11-03 22:57 IST

ಬೀಜಿಂಗ್,ನ.3: ಗಂಭೀರವಾದ ಅರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಪಾಕಿಸ್ತಾನಕ್ಕೆ ಚೀನವು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಿದೆಯೆಂದು, ಬೀಜಿಂಗ್‌ನ ಉನ್ನತ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಉಭಯದೇಶಗಳ ವ್ಯೂಹಾತ್ಮಕ ಬಾಂಧವ್ಯಕ್ಕೆ ಉತ್ತೇಜನ ನೀಡಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಜೊತೆ ಮಾತುಕತೆ ನಡೆಸಿದ ಬಳಿಕ 16 ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿಹಾಕಿದ ಬೆನ್ನಲ್ಲೇ ಬೀಜಿಂಗ್ ಈ ಹೇಳಿಕೆ ನೀಡಿದೆ.

ಬಹುಕೋಟಿ ಡಾಲರ್ ವೆಚ್ಚದ ಚೀನಾ-ಪಾಕ್ ಆರ್ಥಿಕ ಕಾರಿಡಾರ್ (ಸಿಪಿಇಸಿ)ಯೋಜನೆಯ ಕುರಿತು ಉಭಯ ರಾಷ್ಟ್ರಗಳ ನಡುವೆ ತಲೆದೋರಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಕುರಿತು ಮಾತುಕತೆ ನಡೆಸಲು ಇಮ್ರಾನ್ ಖಾನ್ ಅವರು ಚೀನಾಕ್ಕೆ ಭೇಟಿ ನೀಡಿದ್ದಾರೆ.

ಪಾಕ್-ಚೀನಾ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿಹಾಕಿದ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚೀನಿ ಪ್ರಧಾನಿ ಲಿ ಕೆಕಿಯಾಂಗ್ ಅವರು, ‘‘ ಚೀನಾವು ತನ್ನ ವಿದೇಶಾಂಗ ನೀತಿಯಲ್ಲಿ ಪಾಕಿಸ್ತಾನಕ್ಕೆ ಸದಾ ಆದ್ಯತೆಯನ್ನು ನೀಡುತ್ತಲೇ ಬಂದಿದೆ. ಬೀಜಿಂಗ್‌ಗೆ ಪಾಕ್ ಪ್ರಧಾನಿಯವರ ಭೇಟಿಯು ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲಿದೆ’’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಿ ಲಿಗೆ ಕೃತಜ್ಞತೆಯರ್ಪಿಸಿ ಮಾತನಾಡಿದ ಇಮ್ರಾನ್, ‘‘2013ರಲ್ಲಿ ಸಿಪಿಇಸಿಯು ಚಿಂತನೆಯ ಹಂತದಲ್ಲಿದ್ದಾಗಲೇ ಉಭಯದೇಶಗಳ ಬಾಂಧವ್ಯಗಳು ಗಾಢವಾದವು. ಇದೀಗ ಪಾಕ್ ಜನತೆಯ ಇಚ್ಛೆೆಗೆ ಅನುಗುಣವಾಗಿ ಸಿಪಿಇಸಿ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ’’ ಎಂದರು.

ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆಯಿಂದ ಎರಡೂ ದೇಶಗಳ ಜೀವನಮಟ್ಟ ಹಾಗೂ ಬೆಳವಣಿಗೆ ದರ ಏರಿಕೆಯಾಗಲಿದೆ ಎಂದು ಖಾನ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಹಣಕಾಸು ಬಿಕ್ಕಟ್ಟಿಗೆ ತುತ್ತಾಗಿರುವ ಚೀನಾಗೆ 6 ಶತಕೋಟಿ ಡಾಲರ್ ನೆರವು ನೀಡುವುದಾಗಿ ಬೀಜಿಂಗ್ ಭರವಸೆ ನೀಡಿದೆ. ಚೀನಾ-ಪಾಕ್ ಅರ್ಥಿಕ ಕಾರಿಡಾರ್‌ಗೆ 3 ಶತಕೋಟಿ ಡಾಲರ್ ಅಮೆರಿಕ ಡಾಲರ್ ನೆರವಿನ ಜೊತೆಗೆ ಪಾಕ್‌ಗೆ ಹೆಚ್ಚುವರಿಯಾಗಿ 1.5 ಶತಕೋಟಿ ಡಾಲರ್ ನೆರವಿನ ಕೊಡುಗೆಯನ್ನು ಚೀನಾ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News