ಸಾಹಿತಿಗಳಿಗೆ ಡಿಎಂಕೆ ಮೆಂಟಾಲಿಟಿ ಬೇಡ: ಡಾ. ಎಸ್.ಎಲ್.ಭೈರಪ್ಪ
ಮಂಗಳೂರು, ನ. 3: ನನ್ನ ಬರವಣೆಗೆಯಲ್ಲಿ ಇಡೀ ಭಾರತ ಇದೆ. ನಾನು ಒಂದು ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗಿ ಬರೆದಿರುವುದು ಕಡಿಮೆ. ಆ ಕಾರಣದಿಂದ ಭಾರತದಲ್ಲಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಬೈರಪ್ಪ ತಿಳಿಸಿದರು.
ಅವರು ನಗರದ ಟಿಎಂಎಪೈ ಸಭಾಂಗಣದಲ್ಲಿ ದಿ ಐಡಿಯಾ ಆಫ್ ಭಾರತ ಮಂಗಳೂರು ಸಂಘಟನೆಯ ವತಿಯಿಂದ ಹಮ್ಮಿಕೊಂಡ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಭಾರತದಲ್ಲಿ ಎಲ್ಲಿ ಹೋದರು ಜನರ ರೀತಿ, ನೀತಿಯ ನಡುವೆ ಹೆಚ್ಚು ವ್ಯತ್ಯಾಸಗಳಿಲ್ಲ ಸಾಮ್ಯತೆ ಇದೆ. ಈ ವಿಚಾರವನ್ನು ನನ್ನ ವಂಶ ವೃಕ್ಷ ಕೃತಿಯಲ್ಲಿ ಪ್ರಸ್ತಾಪಿಸಿದ್ದೇನೆ. ಗೃಹ ಭಂಗ ಕಾದಂಬರಿಯನ್ನು ಓದಿದ ಒಬ್ಬ ಪಂಜಾಬಿ ನಮ್ಮ ಸಂಸ್ಕೃತಿ ನಿಮ್ಮ ಸಂಸ್ಕೃತಿ ಸಾಮ್ಯತೆ ಇದೆ ಎಂದಿದ್ದಾರೆ. ನನ್ನ ಬರವಣಿಗೆಯಲ್ಲಿ ಅದನ್ನು ನೀವು ಕಾಣಬಹುದು. ನನ್ನ ಮಂದ್ರ ಕಾದಂಬರಿಯಲ್ಲಿ ಮುಂಬೈ, ಪುಣೆ, ಉತ್ತರ ಭಾರತ ಇದೆ ಕರ್ನಾಟಕ ಇಲ್ಲ. ಈ ರೀತಿ ಭಾರತವನ್ನು ನೋಡಬೇಕಾದರೆ ಸಮಗ್ರ ಭಾರತದ ಬಗ್ಗೆ ಪ್ರೀತಿ ಇರಬೇಕಾಗುತ್ತದೆ. ಈಗಿನ ಕೆಲವು ಸಾಹಿತಿಗಳಿಗೆ ಭಗವದ್ಗೀತೆ ಬೇಡ, ತತ್ವಶಾಸ್ತ್ರ ಬೇಡ ಎನ್ನುವ ಡಿಎಂಕೆ ಮೆಂಟಾಲಿಟಿ ಅದನ್ನು ಮೀರದೆ ಇದ್ದರೆ ಅದು ಇಂಡಿಯನ್ ಬರಹ ಆಗುವುದಿಲ್ಲ ಎಂದು ಭೈರಪ್ಪ ತಿಳಿಸಿದರು.
ನವ್ಯದ ಬರಹಗಾರರು ನನ್ನನ್ನು ಮಟ್ಟ ಹಾಕಲು ಯತ್ನಿಸಿದರು
ನಾನು ಕಾದಂಬರಿ ಬರೆಯುತ್ತಿದ್ದ ಕಾಲದಲ್ಲಿ ಕನ್ನಡ ಸಾಹಿತ್ಯದಲ್ಲಿ ಹುಟ್ಟಿಕೊಂಡ ನವ್ಯ ಪಂಥದ ಬರಹಗಾರರ ಹಾವಳಿ ತುಂಬಾ ಇತ್ತು. ನನ್ನನ್ನು ಮಟ್ಟ ಹಾಕಲು ಯತ್ನಿಸಿದ್ದರು. ಆದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನನಗೆ ಅನಿಸತೊಡಗಿತ್ತು. ನಾನು ಅವರನ್ನು ನಿರ್ಲಕ್ಷಿಸಿ ನನ್ನ ಕೃತಿಯನ್ನು ಮುಂದುವರಿಸುತ್ತಲೆ ಬಂದೆ. ನವ್ಯ ಕಾಲದ ಬರಹಗಾರರು ಅಪಾಯಕಾರಿಯಾಗಿದ್ದರು ಏಕೆಂದರೆ ಅವರು ಬರಹದ ಜೊತೆ ವಿಮರ್ಶೆಯನ್ನು ಮಾಡುತ್ತಿದ್ದರು ಎಂದು ಬೈರಪ್ಪ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಲೆಪ್ಟಿಸ್ಟ್ ಪ್ರವೃತ್ತಿ ಬಂದರೆ ಹಾಳಾಗುತ್ತೆ.:- ದಕ್ಷಿಣ ಕನ್ನಡ ಜಿಲ್ಲೆಯ ಜೀವಿಗಳು ಶ್ರಮ ಜೀವಿಗಳು, ತಮ್ಮ ಶ್ರಮದಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಷ್ಟ ಪಟ್ಟು ಹೊಟೇಲ್ ಆರಂಭಿಸಿ, ವಿದೇಶಗಳಿಗೆ ತೆರಳಿ ಸಂಪಾದಿಸಿ ಮೇಲೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಚೈನ್ ರೀತಿಯ ಅಂಗಡಿ ಮಳಿಗೆ ತೆರೆದಿದ್ದಾರೆ. 70-80 ವರ್ಷಗಳ ಹಿಂದೆ ಈ ಜಿಲ್ಲೆಯಲ್ಲಿ ಬಡತನ ಗರಿಷ್ಠ ಮಟ್ಟದಲ್ಲಿತ್ತು. ಈಗ ರಾಜ್ಯಕ್ಕೆ ಮಾದರಿಯಾದ ಜಿಲ್ಲೆಯಾಗಿದೆ. ಅದಕ್ಕೆ ಕಾರಣ ಇಲ್ಲಿನ ಜನರಲ್ಲಿರುವ ಶಿಕ್ಷನ ಪ್ರೇಮ, ಶಿಸ್ತು, ಪರಿಶ್ರಮ ಅದಕ್ಕೆ ಒಂದು ಉದಾಹರಣೆ. ಸಾಹಿತ್ಯ ಕ್ಷೇತ್ರದಲ್ಲಿ ಡಾ. ಶಿವರಾಮ ಕಾರಂತರು ಒಂದು ಉದಾಹರಣೆ ಇಂತಹ ಜಿಲ್ಲೆಗೆ ಕಮ್ಯೂನಿಸ್ಟ ಪ್ರವೃತ್ತಿ ಒಳ್ಳೆಯದಲ್ಲ, ಕಮ್ಯುನಿಸ್ಟರು ಯಾರಾದರೂ ಒಂದು ಉದ್ಯಮ ಸ್ಥಾಪಿಸಿದರೆ ಅದನ್ನು ನಾಶ ಮಾಡುತ್ತಾರೆ ಎಂದು ಕಮ್ಯುನಿಸ್ಟರ ವಿರುದ್ಧ ಭೈರಪ್ಪ ತಮ್ಮ ಅಸಹನೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮೋದಿಯನ್ನು ಬೆಂಬಲಿಸಿ ಮಾತನಾಡುತ್ತಾ ಮೋದಿಯನ್ನು ವಿರೋಧ ಪಕ್ಷದವರು ಏನು ಮಾಡಿದರೂ ಟೀಕಿಸುತ್ತಾರೆ. ಮೋದಿಯವರ ಗಟ್ಟಿ ಮನೋಭಾವ ನನಗೆ ಗೊತ್ತಿದೆ. ಅದೇ ರೀತಿ ನಾನು, ನನ್ನನ್ನು ವಿರೊಧಿಸಿದವರನ್ನು ನಿರ್ಲಕ್ಷಿಸಿ ಬರೆಯುತ್ತಲೇ ಹೋದೆ ಎಂದು ವಿವರಿಸಿದರು.
ಬೈರಪ್ಪರನ್ನು ಅಭಿನಂದಿಸಿ ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಾ, ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂಟಲೆಕ್ಷುವಲ್ ಕ್ಷತ್ರಿಯರ ದಾಳಿಯಾಗಿದೆ. ಈ ದಾಳಿಗೆ ಬೆಂಬಲವಾಗಿ ನಿಂತ ಡಾ. ಎಸ್.ಎಲ್.ಭೈರಪ್ಪ ಅವರನ್ನು ನ್ಮಾನಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ನಿಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎನ್ ವಿನಯ ಹೆಗ್ಡೆ ಡಾ.ಎಸ್.ಎಲ್.ಬೈರಪ್ಪರನ್ನು ಸನ್ಮಾನಿಸಿದರು.