ಇಂಗ್ಲೆಂಡ್: ವ್ಯಕ್ತಿಯನ್ನು ಬಂಧನದಲ್ಲಿಟ್ಟು, 4 ವರ್ಷ ಜೀತಕ್ಕಿಟ್ಟಿದ್ದ ಭಾರತೀಯ ದಂಪತಿಯ ಬಂಧನ

Update: 2018-11-03 17:34 GMT

ಲಂಡನ್,ನ.3: ಸುಮಾರು ನಾಲ್ಕು ವರ್ಷಗಳ ಕಾಲ ಪೋಲೆಂಡ್ ಮೂಲದ ಕಟ್ಟಡ ನಿರ್ಮಾಣ ಕಾರ್ಮಿಕನೊಬ್ಬನನ್ನು ತಮ್ಮ ಮನೆಯ ಕೈತೋಟದ ಶೆಡ್‌ನಲ್ಲಿ ಬಂಧಿಯಾಗಿರಿಸಿದ ಆರೋಪದಲ್ಲಿ ದಕ್ಷಿಣ ಇಂಗ್ಲೆಂಡ್‌ನ ನಲ್ಲಿ ಭಾರತೀಯ ಮೂಲದ ದಂಪತಿಯನ್ನು ಶನಿವಾರ ಬಂಧಿಸಲಾಗಿದೆ. ಅವರ ವಿರುದ್ಧ ‘ಅಧುನಿಕ ಗುಲಾಮಗಿರಿ’ ಅಪರಾಧವನ್ನು ಎಸಗಿದ ಆರೋಪವನ್ನು ಹೊರಿಸಲಾಗಿದೆ.

ಸೌತ್‌ ಆ್ಯಂಪ್ಟನ್ ಸಮೀಪದ ಚಿಲ್ ‌ವರ್ತ್ ಪಟ್ಟಣದ ನಿವಾಸಿಗಳಾದ 50ರ ಹರೆಯ ಪಲ್ವಿಂದರ್ ಹಾಗೂ ಪ್ರೀತ್‌ಪಾಲ್  ದಂಪತಿಯ ಭಿನ್ನಿಂಗ್ ನಿವಾಸದ ಮೇಲೆ ದಾಳಿ ನಡೆಸಿದ ಕಾರ್ಮಿಕ ದೌರ್ಜನ್ಯ ತಡೆ ಪ್ರಾಧಿಕಾರ (ಜಿಎಲ್‌ಎಎ) ಅಧಿಕಾರಿಗಳು, ಅವರಿಬ್ಬರನ್ನೂ ಬಂಧಿಸಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ದಂಪತಿಯು ತನಗೆ ಆಹಾರಕ್ಕೆ ಬದಲಿಯಾಗಿ ಬಲವಂತವಾಗಿ ಜೀತದ ದುಡಿಮೆ ಮಾಡಿಸಿಕೊಳ್ಳುತ್ತಿದ್ದರೆಂದು ಪೋಲೆಂಡ್ ಮೂಲದ ಕಾರ್ಮಿಕನು, ಸೌತ್‌ಆ್ಯಂಪ್ಟನ್ ನಗರದ ಆರೋಗ್ಯಕೇಂದ್ರದ ಸಿಬ್ಬಂದಿಗೆ ದೂರು ನೀಡಿದ ಬಳಿಕ, ಈ ದಂಪತಿಯ ನಿವಾಸದ ಮೇಲೆ ದಾಳಿ ನಡೆಸಲಾಯಿತೆಂದು ಜಿಎಲ್‌ಎಎ ಅಧಿಕಾರಿಗಳು ತಿಳಿಸಿದ್ದಾರೆ.

ತಾನು ಕೈತೋಟದ ಶೆಡ್‌ನಲ್ಲಿರುವ ಮುರುಕಲು ಪ್ಲಾಸ್ಟಿಕ್ ಕುರ್ಚಿಯಲ್ಲೇ ಕುಳಿತೇ ನಿದ್ರಿಸಬೇಕಾಗುತ್ತಿತ್ತು ಹಾಗೂ ತನಗೆ ಹಳಸಿದ ಆಹಾರವನ್ನಷ್ಟೇ ನೀಡಲಾಗುತ್ತಿತ್ತೆಂದು ಸಂತ್ರಸ್ತ ಕಾರ್ಮಿಕ ದೂರಿದ್ದಾನೆ.

40ರ ಹರೆಯದ ಈ ಕಾರ್ಮಿಕನನ್ನು ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿದ್ದು, ಆತನಿಗೆ ಚಿಕಿತ್ಸೆ ಹಾಗೂ ಆರೈಕೆಯನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News