ಪ್ರಾಣಭೀತಿ: ಪಾಕ್ ತ್ಯಜಿಸಿದ ಅಸಿಯಾ ಬೀಬಿ ವಕೀಲ

Update: 2018-11-03 17:38 GMT

ಇಸ್ಲಾಮಾಬಾದ್,ನ.3: ದೇವನಿಂದನೆಯ ಆರೋಪದಲ್ಲಿ ಗಲ್ಲುಶಿಕ್ಷೆಯನ್ನು ಎದುರಿಸುತ್ತಿದ್ದ ಕ್ರೈಸ್ತ ಮಹಿಳೆಯನ್ನು ಪಾರು ಮಾಡಿರುವ ಪಾಕಿಸ್ತಾನಿ ನ್ಯಾಯವಾದಿ ಸೈಫುಲ್ ಮುಲೂಕ್ ಅವರು ಶನಿವಾರ ದೇಶವನ್ನು ತ್ಯಜಿಸಿದ್ದಾರೆ. ತನ್ನ ಪ್ರಾಣಕ್ಕೆ ಅಪಾಯವಿರುವುದರಿಂದ ತಾನು ದೇಶವನ್ನು ತೊರೆಯುತ್ತಿರುವುದಾಗಿ ಮುಲೂಕ್ ಹೇಳಿದ್ದಾರೆ.

ದೇವನಿಂದನೆಯ ಆರೋಪದಲ್ಲಿ ಗಲ್ಲುಶಿಕ್ಷೆಗೊಳಗಾಗಿದ್ದ ಕ್ರೈಸ್ತ ಮಹಿಳೆ ಅಸಿಯಾ ಬೀಬಿ ಸುಮಾರು ಒಂದು ದಶಕದಿಂದ ಜೈಲಿನಲ್ಲಿದ್ದರು. ಸುಪ್ರೀಂಕೋರ್ಟ್ ಕಳೆದ ಬುಧವಾರ ಆಕೆಯ ಮರಣದಂಡನೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಅಸಿಯಾ ಬೀಬಿ ಪರವಾಗಿ ಸೈಫುಲ್ ಮೂಲುಕ್ ವಾದಿಸಿದ್ದರು.

ಅಸಿಯಾ ಬೀಬಿಯ ಗಲ್ಲು ಶಿಕ್ಷೆಯ ರದ್ದತಿಯು ಪಾಕ್‌ನಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಲಾಹೋರ್ ಹಾಗೂ ಇಸ್ಲಾಮಾಬಾದ್‌ನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಬೀಬಿಯ ದೋಷಮುಕ್ತಿಯ ತೀರ್ಪು ನೀಡಿದ್ದ ನ್ಯಾಯಾಧೀಶರಿಗೂ ತೀವ್ರವಾದಿಗಳು ಜೀವಬೆದರಿಕೆಯೊಡ್ಡಿದ್ದರು.

 ಪ್ರಸಕ್ತ ಸನ್ನಿವೇಶದಲ್ಲಿ ತನಗೆ ಪಾಕ್‌ನಲ್ಲಿ ಜೀವಿಸಲು ಅಸಾಧ್ಯವೆಂದು ನ್ಯಾಯವಾದಿ ಸೈಫುಲ್ ಮುಲೂಕ್ ಅವರು ಶನಿವಾರ ಮುಂಜಾನೆ ವಿಮಾನದ ಮೂಲಕ ಯುರೋಪ್‌ಗೆ ಪ್ರಯಾಣಿಸುವ ಮುನ್ನ ಪತ್ರಕರ್ತರಿಗೆ ತಿಳಿಸಿದರು. ಅಸಿಯಾ ಬೀಬಿಗಾಗಿ ತಾನು ಇನ್ನೂ ಕಾನೂನು ಹೋರಾಟ ನಡೆಸಬೇಕಾಗಿದೆ. ಅದಕ್ಕಾಗಿಯಾದರೂ ನಾನು ಬದುಕಿರಬೇಕಾಗಿದೆಯೆಂದು ಮುಲೂಕ್ ಹೇಳಿದ್ದಾರೆ.

ಈ ಮಧ್ಯೆ ಅಸಿಯಾ ಬೀಬಿಗೆ ಗಲ್ಲು ಶಿಕ್ಷೆ ರದ್ದತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತೆಹ್ರೆಕೆ ಲಬಾಕ್ ಪಾಕಿಸ್ತಾನ್ ಪಕ್ಷವು, ಸರಕಾರದ ಜೊತೆ ಒಪ್ಪಂದವೇರ್ಪಡಿಸಿಕೊಂಡ ಬಳಿಕ ತಾನು ಪ್ರತಿಭಟನೆ ಕೈಬಿಡುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News