ಕಾಪು ಕಾಂಗ್ರೆಸ್ ಪದಗ್ರಹಣ ಸಮಾರಂಭ
ಕಾಪು, ನ. 3: ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿತರಾಗಿ ಬಲಿಷ್ಠಗೊಳಿಸಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿನಯ ಕುಮಾರ್ ಸೊರಕೆ ಹೇಳಿದರು.
ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ)ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ನವೀನ್‍ಚಂದ್ರ ಎಸ್. ಸುವರ್ಣ ಅಡ್ವೆ ಹಾಗೂ ಕಾಪು ಪುರಸಭಾ ವ್ಯಾಪ್ತಿಯ ನೂತನ ಅಧ್ಯಕ್ಷ ಮುಹಮ್ಮದ್ ಸಾದಿಕ್ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಪಕ್ಷವು ಸುಳ್ಳು ಮತ್ತು ಭಾವನಾತ್ಮಕ ವಿಚಾರಗಳಿಂದ ಮತದಾರರ ದಾರಿ ತಪ್ಪಿಸುತ್ತಿದೆ. ಈ ಹುನ್ನಾರಗಳನ್ನು ಜನರಿಗೆ ಅರ್ಥಮಾಡಿಸುವ ಮೂಲಕ ಜನಮನ ಗೆಲ್ಲಲು ಪೂರಕವಾಗುವಂತೆ ಪಕ್ಷ ಸಂಘಟನೆಯ ಕೆಲಸ ಮಾಡಬೇಕಾಗಿದೆ. ಈ ಬಾರಿಯ ಉಪ ಚುನಾವಣೆಗಳಲ್ಲಿ ಗೆಲುವು ಕಾಂಗ್ರೆಸ್‍ನದ್ದೇ ಆಗಲಿದೆ. ಇದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಭಾರತ ದೇಶಕ್ಕೇ ಪವಿತ್ರವಾದ ಸಂವಿಧಾನವನ್ನು ರಚಿಸಿ ನೀಡಿರುವ ಪಕ್ಷ ಕಾಂಗ್ರೆಸ್ ಆಗಿದೆ. ಈಗ ರಾಷ್ಟ್ರದ ಭಾವೈಕ್ಯತೆಗೆ, ಕೋಮು ಸೌಹಾರ್ದದತೆಗೆ ಮತ್ತು ಜನ ಸಾಮಾನ್ಯರ ಬದುಕಿಗೆ ಧಕ್ಕೆ ತಂದಿರುವ ಕೇಂದ್ರ ಬಿಜೆಪಿ ನೆತೃತ್ವದ ಎನ್‍ಡಿಎ ಸರಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಮತ್ತೊಮ್ಮೆ ಮುಂಚೂಣಿಗೆ ಬರಬೇಕಿದೆ ಎಂದರು.
ನೂತನ ಬ್ಲಾಕ್ ಅಧ್ಯಕ್ಷ ನವೀನ್‍ಚಂದ್ರ ಎಸ್. ಸುವರ್ಣ ಅಡ್ವೆ ಹಾಗೂ ಪುರಸಭಾ ವ್ಯಾಪ್ತಿಯ ಅಧ್ಯಕ್ಷ ಮುಹಮ್ಮದ್ ಸಾದಿಕ್ ತಮ್ಮ ಪದ ಸ್ವೀಕೃತಿಗೆ ಕಾರ್ಯಕರ್ತರ ಬೆಂಬಲವನ್ನು ಕೋರಿ ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಡಿಸಿಸಿ ಅಧ್ಯಕ್ಷ ಜನಾರ್ದನ ತೋನ್ಸೆ ವಹಿಸಿದ್ದರು.
ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ, ಡಿಸಿಸಿ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಡಿಸಿಸಿ ಮಹಿಳಾ ಘಟಕಾಧ್ಯಕ್ಷೆ ಗೀತಾ ವಾಗ್ಳೆ, ಹೆಬ್ರಿ ಬ್ಲಾಕ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಪ್ರಭಾವತಿ ಸಿ. ಸಾಲ್ಯಾನ್, ಅಬ್ದುಲ್ ರಹಿಮಾನ್ ಕನ್ನಂಗಾರ್, ಕೆ. ಇಬ್ರಾಹಿಂ, ರಾಜ್ಯ ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ಶಿವಾಜಿ ಸುವರ್ಣ, ಜಿ. ಪಂ. ಸದಸ್ಯ ವಿಲ್ಸನ್ ರೋಡ್ರಿಗಸ್, ಕಾಪು ಉತ್ತರ ಬ್ಲಾಕ್‍ನ ನಿಯೋಜಿತ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಉಪಸ್ಥಿತರಿದ್ದರು. ಕಾಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಮುಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೆಎಫ್‍ಡಿಸಿ ನಿರ್ದೇಶಕ ದೀಪಕ್ ಕುಮಾರ್ ಎರ್ಮಾಳ್ ವಂದಿಸಿದರು.
ಮಾಜಿ ಅಧ್ಯಕ್ಷರ ಗೈರು: ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ನೂತನ ಅಧ್ಯಕ್ಷ ಆಯ್ಕೆ ವಿಚಾರದಲ್ಲಿ ಅಸಮಾಧಾನವಿರುವುದು ಖಚಿತವಾಗಿದೆ. ಶನಿವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಬೇಕಾದ ಮಾಜಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ಗೈರು ಹಾಜರಾಗಿದ್ದರು.
ಕಾಪು ಬ್ಲಾಕ್‍ನಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್‍ನಲ್ಲಿ ಅಧ್ಯಕ್ಷರ ಬದಲಾಯಿಸಲಿಲ್ಲ. ಇದೀಗ ಹೈಕಮಾಂಡ್ ಆದೇಶದಂತೆ ಬದಲಾವಣೆ ಮಾಡಲಾಗಿದೆ. ಯಾವುದೇ ಗೊಂಲದ ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ9 ಉಪಾಧ್ಯಕ್ಷರಾಗಿದ್ದ ನವೀನ್‍ಚಂದ್ರ ಸುವರ್ಣ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ವಿನಯಕುಮಾರ್ ಸೊರಕೆ ಅವರು ಹೇಳಿದರು.