ಸುಬಾಬುಲ್ ಗಿಡದ ಎಲೆ ತಿಂದ 31 ಜಿಂಕೆಗಳ ಸಾವು
ಚೆನ್ನೈ, ನ.4: ಅತ್ಯಧಿಕ ಪ್ರಮಾಣದಲ್ಲಿ ಸುಬಾಬುಲ್ ಗಿಡದ ಎಲೆಗಳನ್ನು ತಿಂದ ಕಾರಣ ಅಜೀರ್ಣವಾಗಿ 31 ಚುಕ್ಕಿ ಜಿಂಕೆಗಳು ಸಾವನ್ನಪ್ಪಿದ ಘಟನೆ ತಿರುಚಿರಾಪಳ್ಳಿ ಉದ್ಯಾನವನದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಬಾಬುಲ್ ಗಿಡದ ಎಲೆಗಳಲ್ಲಿ ಪ್ರೊಟೀನ್ ಅಂಶ ಇದ್ದರೂ ಇವುಗಳಲ್ಲಿ ಅಮೈನೊ ಆ್ಯಸಿಡ್‌ನ ವಿಷಕಾರಿ ಅಂಶ ಹೆಚ್ಚಿದ್ದು ಜಿಂಕೆಗಳಿಗೆ ಈ ಆಹಾರ ಇಷ್ಟವಾಗಿದೆ. ಜಿಂಕೆಗಳು ಅಧಿಕ ಪ್ರಮಾಣದಲ್ಲಿ ಸೇವಿಸಿದ ಕಾರಣ ಅಜೀರ್ಣವಾಗಿದ್ದು ಜಿಂಕೆಗಳು ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ .
ನವೆಂಬರ್ 1ರಂದು 17, 2ರಂದು 8, 3ರಂದು ಆರು ಜಿಂಕೆಗಳು ಸಾವನ್ನಪ್ಪಿವೆ. ಇದರಲ್ಲಿ 25 ಹೆಣ್ಣು ಜಿಂಕೆಗಳಾಗಿದ್ದು ಕೆಲವು ಗರ್ಭ ಧರಿಸಿದ್ದವು ಎಂದವರು ತಿಳಿಸಿದ್ದಾರೆ. ಉದ್ಯಾನವನದಲ್ಲಿ ಸುಮಾರು 180 ಜಿಂಕೆಗಳಿದ್ದು ಇದೀಗ ಉಳಿದ ಜಿಂಕೆಗಳ ಚಲನವಲನದ ಬಗ್ಗೆ ಗಮನ ನೀಡಲಾಗುತ್ತಿದ್ದು ಜಿಂಕೆಗಳಿಗೆ ಸುಬಾಬುಲ್ ಗಿಡದ ಎಲೆ ನೀಡದಂತೆ ಸೂಚಿಸಲಾಗಿದೆ. ಶನಿವಾರದ ಬಳಿಕ ಜಿಂಕೆಗಳು ಸಾವನ್ನಪ್ಪಿದ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.