ನ.16-17: ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
ಮಂಗಳೂರು, ನ.4: ಎನ್‌ಸಿಇಆರ್‌ಟಿ (ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ)ಯಿಂದ ಈ ಸಾಲಿನ ಪ್ರೌಢಶಾಲಾ ಪಠ್ಯಕ್ರಮ ಪರಿಷ್ಕರಿಸಿದ್ದು, ಈ ಬಗ್ಗೆ ಪ್ರೌಢಶಾಲಾ ಶಿಕ್ಷಕರಿಗೆ ನ.16 ಮತ್ತು 17ರಂದು ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ದ.ಕ., ಉಡುಪಿ ಜಿಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಘದಿಂದ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಎನ್‌ಸಿಇಆರ್‌ಟಿಯು ಪ್ರೌಢಶಾಲೆಯ ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ ವಿಷಯಗಳ ಪಠ್ಯಕ್ರಮವನ್ನು ಪರಿಷ್ಕರಿಸಿದ್ದು, ಪದವಿಪೂರ್ವ ಕಾಲೇಜು ಮಟ್ಟದ ಪಠ್ಯಕ್ರಮವನ್ನು ಪ್ರೌಢಶಾಲೆಯ ಪಠ್ಯಕ್ರಮವನ್ನಾಗಿ ಪರಿವರ್ತಿಸಿದೆ. ನೂತನ ಪಠ್ಯಕ್ರಮದ ಬಗ್ಗೆ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಸುಲಭವಾಗಿ ಪಾಠ ಮಾಡಲು ಸಾಧ್ಯವಾಗಲಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಘದ ಅಧ್ಯಕ್ಷ ವೈ. ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.
ನ.16ರಂದು ಬೆಳಗ್ಗೆ 9 ಗಂಟೆಗೆ ಗಣಿತ ವಿಷಯದಲ್ಲಿ ವಿಜಯಾ ಕಾಲೇಜಿನ ಪ್ರೊ. ವಿಜಯಕುಮಾರಿ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 1ಕ್ಕೆ ‘ಆಟಿಸ್ಟಿಕ್ ಆ್ಯಂಡ್ ಡಿಸ್ಲೆಕ್ಸಿಸ್ ಸ್ಟುಡೆಂಟ್ಸ್’ ಎಂಬ ವಿಷಯದಲ್ಲಿ ವಿಕಾಸನ ಟ್ರಸ್ಟ್‌ನ ತಜ್ಞರಾದ ಗೀತಾ ಶೆಟ್ಟಿ ಮತ್ತು ಡಾ. ಶೈಲಜಾ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ರಸಾಯನಶಾಸ್ತ್ರ ವಿಷಯದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ಪ್ರೊ. ಭಾಸ್ಕರ್ ಆಚಾರ್ಯ ಉಪನ್ಯಾಸ ನೀಡಲಿದ್ದಾರೆ.
ನ.17ರಂದು ಬೆಳಗ್ಗೆ 9 ಗಂಟೆಗೆ ಜೀವಶಾಸ್ತ್ರ ವಿಷಯದಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರೊ. ಈಶ್ವರ್ ಭಟ್ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 1:30ಕ್ಕೆ ಭೌತಶಾಸ್ತ್ರ ವಿಷಯದಲ್ಲಿ ಮುಲ್ಕಿಯ ವಿಜಯ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟೇಶ ಭಟ್ ಉಪನ್ಯಾಸ ನೀಡಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ದ.ಕ., ಉಡುಪಿ ಜಿಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಘದ ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ, ಖಜಾಂಚಿ ಸವಣೂರು ಸೀತಾರಾಮ್ ರೈ, ಸಹಾಯಕ ಕಾರ್ಯದರ್ಶಿ ಜಯಸೂರ್ಯ ರೈ ಮತ್ತಿತರರು ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಘದ ಅಧ್ಯಕ್ಷ ವೈ. ಮುಹಮ್ಮದ್ ಬ್ಯಾರಿ (9880314522), ಕಾರ್ಯದರ್ಶಿ ಕೆ.ರವೀಂದ್ರ ಶೆಟ್ಟಿ (9448254262) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.