ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿ ಬಿಡುಗಡೆಗೊಳಿಸದ ಆರ್ ಬಿಐ ಗವರ್ನರ್ ಗೆ ಸಿಐಸಿ ಶೋಕಾಸ್ ನೋಟಿಸ್

Update: 2018-11-04 17:33 GMT

ನ.4: ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಗೊಳಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಸೂಚನೆಯನ್ನು ಮಾನ್ಯ ಮಾಡದ ಕಾರಣಕ್ಕೆ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್‌ಗೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ಕೆಟ್ಟ ಸಾಲಗಳ ಬಗ್ಗೆ ಮಾಜಿ ಆರ್‌ಬಿಐ ಗವರ್ನರ್ ಬರೆದಿರುವ ಪತ್ರವನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವಂತೆ ಪ್ರಧಾನಮಂತ್ರಿ ಕಚೇರಿ ಮತ್ತು ವಿತ್ತ ಸಚಿವಾಲಯ ಹಾಗೂ ಆರ್‌ಬಿಐಗೆ ಸಿಐಸಿ ಸೂಚಿಸಿದೆ.

50 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಸಾಲ ಪಡೆದು ಮರುಪಾವತಿಸದ ಉದ್ದೇಶಿತ ಸುಸ್ತಿದಾರರ ಪಟ್ಟಿಯನ್ನು ಘೋಷಿಸುವಂತೆ ಸುಪ್ರೀಂಕೋರ್ಟ್‌ನ ಆದೇಶದ ಹೊರತಾಗಿಯೂ ಇದನ್ನು ಪಾಲಿಸದ ಆರ್‌ಬಿಐ ಕ್ರಮವನ್ನು ಖಂಡಿಸಿರುವ ಸಿಐಸಿ, ಆದೇಶಕ್ಕೆ ಗೌರವ ನೀಡದ ನಿಮ್ಮ ಮೇಲೆ ಯಾಕೆ ದಂಡ ವಿಧಿಸಬಾರದು ಎಂದು ಪಟೇಲ್‌ರನ್ನು ಪ್ರಶ್ನಿಸಿದೆ. ಅಲ್ಲದೆ , ಉದ್ದೇಶಿತ ಸುಸ್ತಿದಾರರ ಹೆಸರನ್ನು ಬಹಿರಂಗಗೊಳಿಸುವಂತೆ ಅಂದಿನ ಮಾಹಿತಿ ಆಯೋಗದ ಆಯುಕ್ತ ಶೈಲೇಶ್ ಗಾಂಧಿ ತೆಗೆದುಕೊಂಡಿದ್ದ ನಿರ್ಧಾರವನ್ನು ಎತ್ತಿಹಿಡಿದಿದೆ.

ಸೆ.20ರಂದು ಕೇಂದ್ರ ಜಾಗೃತಿ ಆಯೋಗ(ಸಿವಿಸಿ)ಯ ಸಭೆಯಲ್ಲಿ ಮಾತನಾಡಿದ್ದ ಪಟೇಲ್, ಸಿವಿಸಿ ಜಾರಿಗೊಳಿಸಿರುವ ಮಾರ್ಗದರ್ಶಿ ಸೂತ್ರಗಳು ಹೆಚ್ಚಿನ ಪಾರದರ್ಶಕತೆಯನ್ನು ಸಾಧಿಸುವ ಹಾಗೂ ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿರುವುದನ್ನು ಸಿಐಸಿ ಉಲ್ಲೇಖಿಸಿದೆ. ಆದರೆ ಆರ್‌ಬಿಐ ಗವರ್ನರ್ ಹಾಗೂ ಉಪ ಗವರ್ನರ್ ಹೇಳಿಕೆಯಲ್ಲಿ ಸಾಮ್ಯತೆ ಇಲ್ಲದಿರುವುದನ್ನು ಸಿಐಸಿ ಗಮನಿಸಿದೆ. ಅಲ್ಲದೆ ಮಾಹಿತಿ ಹಕ್ಕು ಕಾಯ್ದೆಯ ನೀತಿ, ಜಾಗೃತ ಇಲಾಖೆಯ ವರದಿಯ ಗೌಪ್ಯತೆ ಕಾಯ್ದುಕೊಳ್ಳುವ ನೀತಿಯಲ್ಲಿ ಸಾಮ್ಯತೆ ಇಲ್ಲ ಎಂದು ಮಾಹಿತಿ ಹಕ್ಕು ಆಯುಕ್ತ ಶ್ರೀಧರ್ ಆಚಾರ್ಯಲು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ , ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸದಿರುವ ಕ್ರಮಕ್ಕೆ ಆರ್‌ಬಿಐ ಗವರ್ನರ್ ಹೊಣೆಗಾರನೆಂದು ಆಯೋಗ ಪರಿಗಣಿಸಿದ್ದು ನವೆಂಬರ್ 16ರ ಮೊದಲು ತಮ್ಮ ಕೃತ್ಯಕ್ಕೆ ಕಾರಣ ತಿಳಿಸುವಂತೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 22 ಆರ್‌ಬಿಐ ಉದ್ದೇಶಿತ ಸುಸ್ತಿದಾರರ ಹೆಸರನ್ನು ಬಹಿರಂಗಗೊಳಿಸುವ ಪ್ರಕ್ರಿಯೆಗೆ ಅನ್ವಯಿಸುವುದಿಲ್ಲ ಎಂಬ ಆರ್‌ಬಿಐ ಪರ ವಕೀಲ ಸಂತೋಷ್ ಕುಮಾರ್ ಪಾಣಿಗ್ರಾಹಿ ಅವರ ವಾದವನ್ನು ಆಚಾರ್ಯಲು ತಳ್ಳಿಹಾಕಿದರು. ಅಲ್ಲದೆ ಉದ್ದೇಶಿತ ಸುಸ್ತಿದಾರರ ಹೆಸರು ಬಹಿರಂಗಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಕಾರಣ ಈಗ ಹೆಸರು ಬಹಿರಂಗಗೊಳಿಸಲಾಗದು ಎಂಬ ವಾದವನ್ನೂ ಆಚಾರ್ಯಲು ಒಪ್ಪಲಿಲ್ಲ. ನೂರಾರು ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿರುವ ಉದ್ದೇಶಿತ ಸುಸ್ತಿದಾರರ ಹೆಸರು ಮತ್ತು ವಿವರ ಬಚ್ಚಿಡುವುದರಲ್ಲಿ ಅರ್ಥವಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News