×
Ad

ಲಯನ್ ಏರ್ ವಿಮಾನದ ರೆಕಾರ್ಡರ್‌ನಿಂದ ವಿವರವಾದ ಮಾಹಿತಿ ಲಭ್ಯ

Update: 2018-11-04 22:15 IST

ಜಕಾರ್ತ, ನ. 4: ಜಾವಾ ಸಮುದ್ರದಲ್ಲಿ ಸೋಮವಾರ ಪತನಗೊಂಡಿರುವ ಇಂಡೋನೇಶ್ಯದ ‘ಲಯನ್ ಏರ್’ ವಾಯುಯಾನ ಸಂಸ್ಥೆಗೆ ಸೇರಿದ ವಿಮಾನದ ಫ್ಲೈಟ್ ರೆಕಾರ್ಡರ್‌ ನಿಂದ ಗಂಟೆಗಳ ಕಾಲದ ಮಾಹಿತಿಯನ್ನು ಹೊರದೆಗೆಯುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಜಕಾರ್ತದಿಂದ ಹೊರಟ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನಗೊಂಡಿತ್ತು.

ವಿಮಾನದಲ್ಲಿದ್ದ ಎಲ್ಲ 189 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಲಾಗಿದೆ.

ವಿಮಾನದ ಕೊನೆಯ ಹಾರಾಟ ಸೇರಿದಂತೆ 69 ಗಂಟೆಗಳ ಹಾರಾಟ ಮಾಹಿತಿಯನ್ನು ಹೊರದತೆಗೆಯಲಾಗಿದೆ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷಾ ಸಮಿತಿಯ ಉಪಾಧ್ಯಕ್ಷ ಹಾರ್ಯೊ ಸಟ್ಮಿಕೊ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

ವಿಮಾನದ ಫ್ಲೈಟ್ ಡಾಟಾ ರೆಕಾರ್ಡರನ್ನು ಮುಳುಗುಗಾರರು ಗುರುವಾರ ಜರ್ಝರಿತ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದರು. ಅದರಿಂದ ಮಾಹಿತಿಗಳನ್ನು ಹೊರಪಡೆಯಲು ವಿಶೇಷ ಪರಿಣತಿಯ ಅಗತ್ಯವಿದೆ ಎಂಬುದಾಗಿ ತನಿಖಾಧಿಕಾರಿಗಳು ಹೇಳಿದ್ದರು.

ವಿಮಾನದ ಪ್ರಯಾಣಿಕ ಭಾಗ ಪತ್ತೆ

ಲಯನ್ ಏರ್ ವಿಮಾನದ ಪ್ರಯಾಣಿಕ ಭಾಗ ಮತ್ತು ಇಂಜಿನ್‌ಗಳನ್ನು ಸಮುದ್ರ ತಳದಲ್ಲಿ ನೋಡಿರುವುದಾಗಿ ಮುಳುಗುಗಾರರು ವರದಿ ಮಾಡಿದ್ದಾರೆ.

ಅದೇ ವೇಳೆ, ಸಂಕೇತ ಸ್ವೀಕಾರ ಸಾಧನ (ಪಿಂಗ್ ಲೊಕೇಟರ್)ವು ಸಂಕೇತಗಳನ್ನು ಪತ್ತೆಹಚ್ಚಿದೆ ಹಾಗೂ ಈ ಸಂಕೇತಗಳು ಕಾಕ್‌ಪಿಟ್‌ನಿಂದ ಬರುತ್ತಿರಬಹುದು ಎಂದು ಇಂಡೋನೇಶ್ಯದ ಶೋಧ ಮತ್ತು ರಕ್ಷಣಾ ತಂಡದ ಮುಖ್ಯಸ್ಥರು ಹೇಳಿದ್ದಾರೆ.

ಎರಡು ಇಂಜಿನ್‌ಗಳು ಮತ್ತು ಲ್ಯಾಂಡಿಂಗ್ ಗಿಯರ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಮುಹಮ್ಮದ್ ಸಯವುಗಿ ತಿಳಿಸಿದರು.

ನೀರಿನ ಮೇಲ್ಮೈಯಿಂದ 30 ಮೀಟರ್ ಆಳದಲ್ಲಿ ವಿಮಾನದ ಅವಶೇಷಗಳಿವೆ, ಆದರೆ ಪ್ರಬಲ ಪ್ರವಾಹದಿಂದಾಗಿ ಶೋಧ ಕಾರ್ಯಾಚರಣೆಗೆ ತಡೆಯಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News