ಲಿಂಗಾನುಪಾತ ಸರಿದೂಗಿಸಲು ಪ್ರಯತ್ನ ಅಗತ್ಯ: ಕುಮಾರ್

Update: 2018-11-04 16:59 GMT

ಉಳ್ಳಾಲ, ನ. 4: ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಲಿಂಗಾನುಪಾತ ಆತಂಕಕಾರಿ ಬೆಳವಣಿಗೆಯಾಗಿದ್ದು, ಇದನ್ನು ಸರಿದೂಗಿಸಲು ವೈದ್ಯಕೀಯ ಕ್ಷೇತ್ರ ಪ್ರಯತ್ನಿಸಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಸೂತಿ, ಸ್ತ್ರೀರೋಗ ಶಾಸ್ತ್ರ ಮತ್ತು ವೈದ್ಯಕೀಯ ವಿಭಾಗದ ಜಂಟಿ ಆಶ್ರಯದಲ್ಲಿ ಕಣಚೂರು ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ಶನಿವಾರ ನಡೆದ `ಪ್ರಸಕ್ತ ಸಮಯ ಗರ್ಭಾವಸ್ಥೆಯಲ್ಲಿ ವೈದ್ಯಕೀಯ ತುರ್ತುಸ್ಥಿತಿ-2018' ಕುರಿತ ನಿರಂತರ ವೈದ್ಯಕೀಯ ಕಲಿಕಾ ಶಿಕ್ಷಣ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1000 ಪುರುಷರಿಗೆ ಕೇವಲ 947 ಮಹಿಳೆಯರಿದ್ದಾರೆ. ಗರ್ಭಾವಸ್ಥೆಯಲ್ಲಿ ವೈದ್ಯರು ಹೆಚ್ಚಿನ ಜಾಗೃತಿಯೊಂದಿಗೆ ಘನತೆ ಕಾಪಾಡು ವುದರ ಮೂಲಕ ತಾಯಿಯ ಮರಣ ಪ್ರಮಾಣ ಇಳಿಸಬಹುದು. ವೈದ್ಯಕೀಯ ಸೇವೆಯಲ್ಲಿ ಗುಣಮಟ್ಟದ ಚಿಕಿತ್ಸೆಯ ಕಾಯ್ದಿರಿಸುವಿಕೆ, ಜ್ಞಾನದ ಉನ್ನತೀಕ ರಣದ ಮೂಲಕ ಜನರು ಗೌರವಿಸುವಂತೆ ಸಮಾಜದಲ್ಲಿ ಬಾಳಬೇಕಿದೆ ಎಂದರು. 

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ರಾಮಕೃಷ್ಣ ರಾವ್ ಮಾತನಾಡಿ, ಖಾಸಗಿ  ವೈದ್ಯಕೀಯ ವಲಯದಲ್ಲಿ ಪ್ರಸೂತಿ ವಿಭಾಗ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದ್ದು, ಪ್ರಸೂತಿ ಹೊಂದುವ ಮಹಿಳೆಯರ ಶೇ.30ರಷ್ಟು ವೆಚ್ಚ ಆರೋಗ್ಯ ಇಲಾಖೆಯಿಂದ ಭರಿಸಲಾಗುತ್ತದೆ. ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಜಂಟಿ ಕಾರ್ಯಾಚರಣೆಯಿಂದ ರಾಜ್ಯದಲ್ಲೇ ಪ್ರಸೂತಿ ವಿಭಾಗಕ್ಕೆ ಪ್ರಥಮ ಸ್ಥಾನವಿದೆ ಎಂದು ತಿಳಿಸಿದರು.

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ.ಮೊಹಮ್ಮದ್ ಇಸ್ಮಾಯಿಲ್ ಎಚ್. ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಜಿ.ಕೆ.ಭಟ್ ಮುಖ್ಯ ಅತಿಥಿಗಳಾಗಿದ್ದರು. ಕಣಚೂರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೇವಿ ಪ್ರಸಾದ್ ಶೆಟ್ಟಿ, ಆಡಳಿತ ಅಧಿಕಾರಿ ಡಾ.ರೋಹನ್ ಮೋನಿಸ್, ಸಹಾಯಕ ಡೀನ್ ಡಾ.ಶ್ರೀಶಾ ಖಂಡಿಗ ಮತ್ತು ಡಾ.ಅಶೋಕ್ ನಾಯಕ್  ಉಪಸ್ಥಿತರಿದ್ದರು. ಡೀನ್ ಡಾ.ವಿರೂಪಾಕ್ಷ  ಸ್ವಾಗತಿಸಿದರು.  ಡಾ.ಕದ್ರಿ ಯೋಗೀಶ್ ಬಂಗೇರ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News