ಸಮ್ಮೇಳನಗಳಿಂದ ತುಳು ಸಂಪತ್ತನ್ನು ಅನುಭವಿಸಲು ದಾರಿ ತೋರಿಸುವ ಕೆಲಸ: ಡಾ. ಕೆ. ಚಿನ್ನಪ್ಪ ಗೌಡ
ಪುತ್ತೂರು, ನ. 4: ತುಳು ಎನ್ನುವುದು ಸಂಪಾತ್ತಾಗಿದ್ದು, ಈ ಸಂಪತ್ತನ್ನು ಅನುಭವಿಸಲು ದಾರಿ ತೋರಿಸುವ ಕೆಲಸವನ್ನು ಸಮ್ಮೇಳನಗಳು ಮಾಡಿಕೊಂಡು ಬಂದಿದೆ. ಸಮ್ಮೇಳನದ ಮೂಲಕ ತುಳು ಸಂಪತ್ತಿನ ಬೀಗದ ಕೀಲಿಯನ್ನು ಹಂಚುವ ಕೆಲಸವಾಗಿದೆ. ಬೀಗವನ್ನು ತೆರೆದು ಕೃಷಿ ಮಾಡುವ ಕೆಲಸವನ್ನು ಅವರವರೇ ಮಾಡಿಕೊಳ್ಳಬೇಕು ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಮಂಜಲ್ಪಡ್ಪು ಸುದಾನ ವಸತಿ ಯುತ ಶಾಲಾ ಆವರಣದಲ್ಲಿ ಶನಿವಾರ ರಾತ್ರಿ ಜರಗಿದ ತುಳು ಸಾಹಿತ್ಯ ಸಮ್ಮೇಳನ ತುಳು ಪರ್ಬ -2018ರ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ತುಳು ಸಮ್ಮೇಳನ ನಡೆಸುವ ಮೂಲಕ ತುಳುವರಲ್ಲಿ ಜಾಗೃತಿ, ಅರಿವು ಮೂಡಿಸುವ ಕೆಲಸವಾಗಿದೆ. ತುಳು ಸಂಪತ್ತಿನ ಕೀಲಿಯನ್ನು ಕೈಗೆ ನೀಡುವ ಕೆಲಸವಾಗಿದೆ. ಮುಂದೆ ಅವರೇ ಅದರಲ್ಲಿರುವ ಮಣ್ಣು, ನೀರು, ಕೃಷಿ, ಯಕ್ಷಗಾನ, ಬೇಸಾಯ ಹೀಗೆ ತಮಗೆ ಬೇಕಾದ್ದನ್ನು ಪಡೆದುಕೊಳ್ಳುತ್ತಾರೆ ಎಂದರು.
ಒಂದು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದು 10 ಪುಸ್ತಕ ಓದುವುದಕ್ಕೆ ಸಮಾನವಾಗಿದೆ. ಪುಸ್ತಕ ಓದುವುದರಿಂದ ಎಲ್ಲವನ್ನೂ ಸಾಧಿಸಲು ಅಸಾಧ್ಯ, ಇಲ್ಲಿ ವಿಚಾರ ಮಂಡಿಸುವ ವಿಧ್ವಾಂಸರ ಮಾತುಗಳು ಕಿವಿಗೆ ಬೀಳುತ್ತಿದ್ದರೆ ಸಹಜವಾಗಿ ಅದರ ಪ್ರಭಾವಗಳು ಬೀರುತ್ತವೆ ಎಂದರು
ಸಮ್ಮೇಳನಾಧ್ಯಕ್ಷ ಡಾ. ಬಿ.ಎ. ವಿವೇಕ್ ರೈ ಮಾತನಾಡಿ, ಪಾತೆರಕತೆಯಲ್ಲಿ ಕೇಳಿಬಂದಂತೆ ತುಳು ವಿಶ್ವವಿದ್ಯಾಲಯ ಅಗತ್ಯವಾಗಿದೆ. ತುಳುವರು 20 -25 ವರ್ಷಗಳಿಂದ ನಿರ್ಣಯ ಮಾಡುತ್ತಾ ಬಂದ ಪರಿಣಾಮದಿಂದ ಈಗಾಗಲೇ ತುಳು ಅಕಾಡೆಮಿ ಸ್ಥಾಪನೆಯಾಗಿದೆ. ಇದೇ ಮಟ್ಟದಲ್ಲಿ ಒತ್ತಡ ಹೇರುವ ಕೆಲಸವಾದಲ್ಲಿ ಮುಂದೊಂದು ದಿನ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ. ತುಳುವಿಗೆ ಉತ್ತಮ ಭವಿಷ್ಯ ಇದೆ ಎಂಬ ಆಶಾವಾದ ಮೂಡಿದೆ. ಯುವಕರು ತುಳು ಪಾಡ್ದನ, ಜಾನಪದದ ಕಡೆ ವಾಲಿದರೆ ತುಳು ಇನ್ನಷ್ಟು ಗಟ್ಟಿ ಬೆಳೆಯುತ್ತದೆ. ಯುವ ಸಮುದಾಯ ಮುಂದಿನ ದಿನಗಳಲ್ಲಿ ತುಳುವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕುದ್ಕಾಡಿ ವಿಶ್ವನಾಥ ರೈ, ಡಾ. ಯು.ಪಿ. ಶಿವಾನಂದ, ಎಂ.ಎಸ್. ಮುಕುಂದ. ಬಾಬು ಮಾಲಡ್ಕ, ಪಾಚು ನಲಿಕೆ, ಅಜಿತ್ ಕುಮಾರ್ ಜೈನ್, ವೆಂಕಮ್ಮ ಐತ್ತಪ್ಪ ನಾಯ್ಕ, ಎನ್. ಕಿಟ್ಟಣ್ಣ ರೈ, ಕೇಶವ ಭಂಡಾರಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಕುಂಬ್ರ ರಘುನಾಥ ರೈ, ರಾಜು ಪೂಜಾರಿ ಇಪ್ಪನೊಟ್ಟು, ಉಮೇಶ್ ಸಾಯಿರಾಮ್, ತಾರಾನಾಥ ಪುತ್ತೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್, ಸ್ವಾಗತ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು, ತುಳು ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ರೆ. ವಿಜಯ ಹಾರ್ವಿನ್, ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ, ಶಶಿಧರ್ ರೈ ಬಾಲ್ಯೋಟ್ಟು ಮತ್ತಿತರರು ಉಪಸ್ಥಿತರಿದ್ದರು.